ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತರು, ಅಹಿಂದ ವರ್ಗಕ್ಕೆ ಅನ್ಯಾಯ: ಹನೀಫ್ ಖಾನ್ ಕೊಡಾಜೆ
ಅವರು ಇಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಜ್ಯದ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು ಎಂಬುದು ಸಂಘಟನೆಗಳ ಬಹುಕಾಲದ ಬೇಡಿಕೆಯಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಸಮುದಾಯದ ಭಾವನೆಗಳಿಗೆ ತಕ್ಕ ಗೌರವ ದೊರೆಯದಿರುವುದು ತೀವ್ರ ನಿರಾಶೆ ಉಂಟುಮಾಡಿದೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನಮಾನ ನೀಡದಿರುವುದು ಹಾಗೂ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಪರಿಗಣಿಸದಿರುವುದು ಸಮುದಾಯಕ್ಕೆ ಅನ್ಯಾಯವಾಗಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಅಹಿಂದ ಸಮುದಾಯಗಳ ಬೆಂಬಲದಿಂದ ಅಧಿಕಾರಕ್ಕೆ ಬಂದ ಸರ್ಕಾರವು ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಅದೇ ವರ್ಗಗಳನ್ನು ಕಡೆಗಣಿಸುವುದು ಸಾಮಾಜಿಕ ನ್ಯಾಯದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಆಗಿರುವ ಅನ್ಯಾಯವಲ್ಲ, ಲಕ್ಷಾಂತರ ಅಲ್ಪಸಂಖ್ಯಾತ ಮತದಾರರ ಭಾವನೆಗಳಿಗೆ ಉಂಟಾಗಿರುವ ನಿರ್ಲಕ್ಷ್ಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಬಗ್ಗೆ ಮಾತನಾಡುವ ಸರ್ಕಾರವು ತನ್ನ ಕಾರ್ಯಗಳ ಮೂಲಕವೂ ಅದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹಾಗೂ ದ.ಕ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಮಾತನಾಡಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟ ಮತ್ತು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು. ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಐದು ಸಚಿವ ಸ್ಥಾನಗಳನ್ನು ನೀಡಬೇಕು. ಸಮುದಾಯದ ಪ್ರಬಲ ಪ್ರತಿನಿಧಿಯಾಗಿರುವ ಜಮೀರ್ ಅಹಮದ್ ಖಾನ್ ಅವರಿಗೆ ಅವರ ರಾಜಕೀಯ ಅನುಭವ ಮತ್ತು ಜನಬೆಂಬಲಕ್ಕೆ ತಕ್ಕ ಗೌರವಯುತ ಸ್ಥಾನಮಾನ ಕಲ್ಪಿಸಬೇಕು. ಮುಸ್ಲಿಂ ಸಮುದಾಯ ಹಾಗೂ ಅಹಿಂದ ವರ್ಗಗಳು ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಣಲು ಬಯಸುತ್ತಿವೆ. ದಲಿತ ಸಮುದಾಯದ ಹಿರಿಯ ನಾಯಕ ಡಾ. ಎಚ್.ಸಿ. ಮಹಾದೇವಪ್ಪ ಅವರನ್ನು ಸಚಿವ ಸಂಪುಟ ರಚನೆಯಲ್ಲಿ ನಿರ್ಲಕ್ಷಿಸಿರುವುದು ಸರಿಯಲ್ಲ. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಅಹಿಂದ ವರ್ಗಗಳ ರಾಜಕೀಯ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿಯನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಮುಂದಿನ ಎಲ್ಲಾ ರಾಜಕೀಯ ಹಾಗೂ ಆಡಳಿತಾತ್ಮಕ ನೇಮಕಾತಿಗಳಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ನ್ಯಾಯಸಮ್ಮತ ಪಾಲು ಖಚಿತಪಡಿಸಬೇಕೆಂದು ಒಕ್ಕೂಟವು ಆಗ್ರಹಿಸುತ್ತದೆ ಎಂದು ಹೇಳಿದರು.
ಮುಸ್ಲಿಂ ಜಸ್ಟಿಸ್ ಫೋರಂನ ಮಾಜಿ ಅಧ್ಯಕ್ಷ ಇರ್ಷಾದ್ ಯು.ಟಿ., ಸಾಮಾಜಿಕ ಹೋರಾಟಗಾರ ಸಲಾಂ ಉಚ್ಚಿಲ್, ಪಬ್ಲಿಕ್ ವಾಯ್ಸ್ ಮುಖ್ಯಸ್ಥ ಸಲೀಂ ಫರಂಗಿಪೇಟೆ ಹಾಗೂ ಎಂಎನ್‌ಜಿ ಫೌಂಡೇಷನ್ ಮಂಗಳೂರು ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕೆದುಂಬಾಡಿ ಉಪಸ್ಥಿತರಿದ್ದರು.