ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್‌ನ ನಿರ್ಮಾಣ ಕಾಮಗಾರಿ ಚುರುಕು: ಸ್ಥಳಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪ್ರಗತಿ ಪರಿಶೀಲನೆ
ಗಂಜಿಮಠದ 104 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ಈ ಬೃಹತ್ ಯೋಜನೆಗೆ ಕೇಂದ್ರದ ಮಾಜಿ ಸಚಿವ ದಿವಂಗತ ಡಿ. ಅನಂತ ಕುಮಾರ್ ಅವರು ರಾಸಾಯನಿಕ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ಆದರೆ, 9.33 ಎಕರೆ ಭೂಸ್ವಾಧೀನ ಪ್ರಕ್ರಿಯೆಯು ನ್ಯಾಯಾಲಯದ ವಿವಾದದಲ್ಲಿದ್ದ ಕಾರಣ ಯೋಜನೆ ಸುದೀರ್ಘ ಕಾಲ ನನೆಗುದಿಗೆ ಬಿದ್ದಿತ್ತು.
ಆ ಬಳಿಕ ಎದುರಾಗಿದ್ದ ಕಾನೂನು ಅಡೆತಡೆಗಳನ್ನು ಅಕ್ಟೋಬರ್ 2025ರಲ್ಲಿ ಯಶಸ್ವಿಯಾಗಿ ತೆರವುಗೊಳಿಸಲಾಯಿತು. ರಿಟ್ ಅಪೀಲ್ ವಜಾಗೊಳ್ಳುವ ಮೂಲಕ ಯೋಜನೆಗಿದ್ದ ಎಲ್ಲಾ ಪ್ರಮುಖ ಕಾನೂನು ತೊಂದರೆಗಳು ಸಂಪೂರ್ಣ ನಿವಾರಣೆಯಾದವು. ಇದರ ಮುಂದುವರಿದ ಭಾಗವಾಗಿ, ಇತ್ತೀಚೆಗೆ ಅಂದರೆ ಮಾರ್ಚ್ 2026ರಲ್ಲಿ ಪಾರ್ಕ್‌ನ ಪರಿಷ್ಕೃತ ವಿನ್ಯಾಸದ ನಕ್ಷೆಗೆ ಅಧಿಕೃತವಾಗಿ ಸರ್ಕಾರದ ಅನುಮೋದನೆ ದೊರೆತಿದ್ದು, ಏಪ್ರಿಲ್ 2026ರಲ್ಲಿ ಉದ್ಯಮಿಗಳಿಗೆ ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆ ಪ್ರಕ್ರಿಯೆಗಾಗಿ ಕೆಐಎಡಿಬಿ ವತಿಯಿಂದ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಕರಾವಳಿಯ ಆರ್ಥಿಕತೆ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಈ ಪ್ಲಾಸ್ಟಿಕ್ ಪಾರ್ಕ್ ಪ್ರಮುಖ ಪಾತ್ರ ವಹಿಸಲಿದೆ. ಇದು ಸ್ಥಳೀಯ ಯುವಕರಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಕಲ್ಪಿಸುವುದಲ್ಲದೆ, ಪರಿಸರ ಪೂರಕ ನಿಯಮಗಳನ್ನು ಪಾಲಿಸಿಕೊಂಡು, ಆಧುನಿಕ ತಂತ್ರಜ್ಞಾನದೊಂದಿಗೆ ಜಿಲ್ಲೆಯ ಕೈಗಾರಿಕಾ ವಿಕಾಸಕ್ಕೆ ಹೊಸ ವೇಗ ನೀಡಲಿದೆ. ಈಗ ಪ್ಲಾಸ್ಟಿಕ್ ಪಾರ್ಕ್‌ನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸದ್ಯ ಸಿಪೆಟ್ ಆಡಳಿತ ಮಂಡಳಿ ಕಟ್ಟಡದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ. ಹೀಗಾಗಿ ಆಸಕ್ತ ಉದ್ಯಮಿಗಳು ಮುಂದೆ ಬಂದು ಇಲ್ಲಿನ ಕೈಗಾರಿಕಾ ಪ್ಲಾಟ್‌ಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿನಂತಿಸಿಕೊಂಡರು.


