ಕರೂಣ್ ನಾಯರ್‌ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್‌ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ


ಮಂಗಳೂರು: ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಸೀಸನ್-5ರ ಅಂಗವಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ಫ್ರಾಂಚೈಸಿಯು ಭಾರತೀಯ ಕ್ರಿಕೆಟಿಗ ಕರೂಣ್ ನಾಯರ್ ಅವರನ್ನು ತಂಡದ ನಾಯಕರಾಗಿ ಭಾನುವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎ ಮಂಗಳೂರು ವಲಯದ ಅಧ್ಯಕ್ಷ ಡಾ. ಶ್ರೀಕಾಂತ್ ರೈ ಘೋಷಿಸಿದರು.

ಇದೇ ಸಂದರ್ಭದಲ್ಲಿ ಫ್ರಾಂಚೈಸಿಯು ತನ್ನ ಚೊಚ್ಚಲ ತಂಡವನ್ನು ಪರಿಚಯಿಸುವುದರ ಜೊತೆಗೆ ನಾಯಕತ್ವ ತಂಡವನ್ನು ಪ್ರಕಟಿಸಿ, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಿತು ಹಾಗೂ ತಂಡದ ಅಧಿಕೃತ ಜೆರ್ಸಿಯನ್ನು ಅನಾವರಣಗೊಳಿಸಿತು. ಪಂದ್ಯಾಟವೂ ಜೂ.20 ರಿಂದ ಜುಲೈ 12 ರವರೆಗೆ ನಡೆಯಲಿದೆ ಎಂದರು.

ತಂಡದ ನಾಯಕ ಕರೂಣ್ ನಾಯರ್ ಮಾತನಾಡಿ, ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕನಾಗಿ ಆಯ್ಕೆಯಾಗಿರುವುದು ನನಗೆ ಹೆಮ್ಮೆಯ ಸಂಗತಿ. ಉತ್ತಮ ಕ್ರಿಕೆಟ್ ಆಡುವುದು, ಪ್ರತಿಯೊಂದು ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡುವುದು ಹಾಗೂ ಟ್ರೋಫಿಯನ್ನು ಮಂಗಳೂರಿಗೆ ತರುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಭಾರತೀಯ ಕ್ರಿಕೆಟಿಗ ಶ್ರೇಯಸ್ ಗೋಪಾಲ್ ಮಾತನಾಡಿ, ನನ್ನ ಪೀಳಿಗೆಯ ಬಹುತೇಕ ಆಟಗಾರರಂತೆ ನಾನು ಕೂಡ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ಅನಿಲ್ ಕುಂಬ್ಳೆ ಅವರನ್ನು ನೋಡಿ ಬೆಳೆದಿದ್ದೇನೆ. ಅವರು ನನ್ನ ಕ್ರಿಕೆಟ್ ಬದುಕಿಗೆ ಪ್ರೇರಣೆಯಾಗಿದ್ದಾರೆ ಎಂದ ಅವರು ಕೋಸ್ಟಲ್ ಕಿಂಗ್ಸ್ ಮಂಗಳೂರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ನಮ್ಮನ್ನು ಬೆಂಬಲಿಸಬೇಕು. ನಾವು ಉತ್ತಮ ಕ್ರಿಕೆಟ್ ಪ್ರದರ್ಶಿಸಿ ನಿಮಗೆ ಮನರಂಜನೆ ನೀಡುವ ಭರವಸೆ ನೀಡುತ್ತೇವೆ ಎಂದರು.

ತಂಡದ ಮಾಲೀಕ ವಿನೋದ್ ನಾಯ್ಡು ಮಾತನಾಡಿ, ನಾವು ಕೇವಲ ಮಂಗಳೂರನ್ನಷ್ಟೇ ಅಲ್ಲ, ಇಡೀ ಕರಾವಳಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇವೆ. ಅದಕ್ಕಾಗಿಯೇ ತಂಡಕ್ಕೆ ‘ಕೋಸ್ಟಲ್ ಕಿಂಗ್ಸ್ ಮಂಗಳೂರು’ ಎಂಬ ಹೆಸರನ್ನು ನೀಡಲಾಗಿದೆ. ಕೆಎಸ್ಸಿಎ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ತಳಮಟ್ಟದ ಕ್ರಿಕೆಟ್ಗೆ ಉತ್ತೇಜನ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಮಹಾರಾಜ ಟ್ರೋಫಿಗೆ ಮಾತ್ರ ಸೀಮಿತವಾಗದೆ, ಕರಾವಳಿ ಭಾಗದ ಯುವ ಕ್ರಿಕೆಟಿಗರೊಂದಿಗೆ ನಿರಂತರ ಸಂಪರ್ಕದಲ್ಲಿರುವ ತಂಡವಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ಬೆಳೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಸ್ಸಿಎ ಗೌರವ ಖಜಾಂಚಿ ಬಿ.ಎನ್. ಮಧುಕರ್, ಕೆಎಸ್ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ್ ವೈದ್ಯ, ಕನ್ನಡ ಹಾಗೂ ತುಳು ಚಿತ್ರನಟ ರೂಪೇಶ್ ಶೆಟ್ಟಿ, ಕೆಎಸ್ಸಿಎ ಪದಾಧಿಕಾರಿಗಳು, ತಂಡದ ಆಟಗಾರರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article