ಮಕ್ಕಳ ಹಕ್ಕುಗಳ ರಕ್ಷಾಣಾ ಅಯೋಗ ಅಧ್ಯಕ್ಷ, ಸದಸ್ಯರು ಹುದ್ದೆಗೆ ಅನರ್ಹರು: ನೇಮಕಾತಿ ಅಧಿಸೂಚನೆ ಹಿಂಪಡೆಯಲು ಆಗ್ರಹ
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಡಿ ಸಂಸ್ಥೆಯ ಸಂಚಾಲಕ ರೆನ್ನಿ ಡಿಸೋಜಾ, ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ನಿಗದಿಪಡಿಸಿದ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ನೇಮಕ ನಡೆದಿಲ್ಲ ಎಂದು ಆರೋಪಿಸಿದರು.
ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ಮಕ್ಕಳ ಕಲ್ಯಾಣ ಮತ್ತು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕನಿಷ್ಠ 10 ವರ್ಷಗಳ ವೃತ್ತಿಪರ ಹಾಗೂ ಅಸಾಧಾರಣ ಅನುಭವ ಹೊಂದಿರಬೇಕು. ಆದರೆ 2026ರ ಮೇ 27ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ನೇಮಕಗೊಂಡಿರುವ ಕೆಲ ವ್ಯಕ್ತಿಗಳು ನಿಗದಿತ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲ. ಕಲಬುರಗಿ ಜಿಲ್ಲೆಯ ಸಂತೋಷ ಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಲಭ್ಯ ಮಾಹಿತಿ ಪ್ರಾರ ಅವರು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರಾಗಿದ್ದಾರೆ. ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಯಾವುದೇ ಗಮನಾರ್ಹ ಕಾರ್ಯ ನಿರ್ವಹಿಸಿದ ಮಾಹಿತಿ ಲಭ್ಯವಿಲ್ಲ. ರಾಯಚೂರು ಜಿಲ್ಲೆ ಸತ್ಯನಾರಾಯಣ ಶೆಟ್ಟಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದ್ದು, ಅವರು ಆಕ್ಸ್‌ಪರ್ಡ್ ಶಿಕ್ಷಣ ಸಂಸ್ಥೆಗಳ ಸಮೂಹದ ಸ್ಥಾಪಕರಾಗಿದ್ದಾರೆ.
ಶಿಕ್ಷಣದ ಹಕ್ಕು ಕಾಯ್ದೆ, 2009ರ ಅನುಷ್ಠಾನ, ಮೇಲ್ವಿಚಾರಣೆ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವ ಜವಾಬ್ಧಾರಿ ಆಯೋಗಕ್ಕೆ ಇರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರತಿನಿಧಿಯೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡುವುದು ಸರಿಯಲ್ಲ. ಬೀದರ್ ಜಿಲ್ಲೆಯ ಜಗನ್ನಾಥ ಹಲಮಡಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸದಸ್ಯರಾಗಿದ್ದು, 2022ರಿಂದ ನ್ಯಾಯಾಂಗ ಪ್ರಕ್ರಿಯೆಗಳ ಕಾರಣದಿಂದ ಈ ಸಂಸ್ಥೆ ನಿಷ್ಕ್ರಿಯವಾಗಿರುವ ವರದಿ ಇದೆ. ಜತೆಗೆ ಸಿಜೆಬಿ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದಾರೆ. ಆದರೆ ಮಕ್ಕಗಳ ಹಕ್ಕುಗಳ ಕ್ಷೇತ್ರದಲ್ಲಿ ಅವರು ಕಾರ್ಯ ನಿರ್ವಹಿಸಿರುವ ಯಾವುದೇ ಸಾರ್ವಜನಿಕ ದಾಖಲೆ ಲಭ್ಯ ಇಲ್ಲ. ಹಾಗಾಗಿ ಇವರೆಲ್ಲರ ನೇಮಕಾತಿ ಅಸಮರ್ಪಕವಾಗಿದೆ ಎಂದು ಆರೋಪಿಸಿದರು.
ಈ ನೇಮಕಾತಿ ಆದೇಶ ಹಿಂಪಡೆದು, ಕಾನೂನಿನ ಪ್ರಕಾರ ಅರ್ಹ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡಬೇಕು. ಆಯ್ಕೆ ಪ್ರಕ್ರಿಯೆ ಕುರಿತು ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಗಾವಹಿಸಿದ ಸಂಬಂಧಿತ ಅಧಿಕಾರಿಗಳ ಪಾತ್ರವನ್ನು ತನಿಖೆ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಬೇಕು ಎಂದವರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿ, ಆಯೋಗಕ್ಕೆ ನೇಮಕ ಮಾಡಲಾದ ವ್ಯಕ್ತಿಗಳ ಬಗ್ಗೆ ವೈಯಕ್ತಿಕವಾಗಿ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಮಕ್ಕಳ ರಕ್ಷಣೆ, ಪೋಷಣೆಗೆ ಸಂಬಂಧಿಸಿದ ಮಹತ್ವದ ಆಯೋಗಕ್ಕೆ ನೇಮಕಾತಿ ಮಾಡುವ ಸಂದರ್ಭ ಸಂಬಂಧಿತ ನಿಯಮ, ಕಾನೂನುಗಳ ಮೂಲಕವೇ ನಡೆಸಿಕೊಂಡು ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡಬೇಕು. ಆಯೋಗಗಳು ರಾಜಕಾರಣಿಗಳ ಗಂಜಿಕೇಂದ್ರ ಆಗಬಾರದು ಎಂದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಕಮಲಾ, ಮಕ್ಕಳ ಮಾಸೋತ್ಸವ ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ಮುಹಮ್ಮದ್ ರಫೀಕ್ ಪುತ್ತೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅನಂತ ರಾವ್ ಹೇರಳೆ, ಎ.ಕೆ. ಹಾರಿಸ್ ಉಪಸ್ಥಿತರಿದ್ದರು.