ಕರಾವಳಿ ಮಹಿಳೆಯರಿಗೆ ವರದಾನವಾದ ಕೇರಳ ‘ಪ್ರಿಯದರ್ಶಿನಿ’

ಕರಾವಳಿ ಮಹಿಳೆಯರಿಗೆ ವರದಾನವಾದ ಕೇರಳ ‘ಪ್ರಿಯದರ್ಶಿನಿ’


ಮಂಗಳೂರು: ಕೇರಳ ಯುಡಿಎಫ್ ಸರಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮಹತ್ವಾಕಾಂಕ್ಷಿ ’ಪ್ರಿಯದರ್ಶಿನಿ’ ಯೋಜನೆಗೆ ಇಂದು ಚಾಲನೆ ದೊರೆತಿದೆ. ಈ ಯೋಜನೆ ಕರಾವಳಿ ಭಾಗದ ಮಹಿಳೆಯರಿಗೆ, ಅದರಲ್ಲೂ ಮಂಗಳೂರು, ಪುತ್ತೂರು ಮತ್ತು ಸುಳ್ಯ ಭಾಗದ ನಾರಿಯರಿಗೆ ವರದಾನವಾಗಿದೆ. ಯಾಕೆಂದರೆ ಕರ್ನಾಟಕದಿಂದ ಕೇರಳದ ಕಾಸರಗೋಡಿಗೆ ಬಿಡಿಗಾಸು ಕೊಡದೆ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದು.

ಕಾಸರಗೋಡು ಜಿಲ್ಲೆಯ 114 ಬಸ್ಸುಗಳಲ್ಲಿ ಈ ಯೋಜನೆಯ ಪ್ರಯೋಜನ ಲಭ್ಯ. ಮೊದಲ ಹಂತದಲ್ಲಿ ಕೇವಲ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್ಸುಗಳು, ಟೌನ್-ಟು-ಟೌನ್ ಮತ್ತು ಲಿಮಿಟೆಡ್ ಸ್ಟಾಪ್ ಆರ್ಡಿನರಿ ಬಸ್ಸುಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಫಾಸ್ಟ್ ಪ್ಯಾಸೆಂಜರ್, ಸೂಪರ್ ಫಾಸ್ಟ್ ಅಥವಾ ಎಕ್ಸ್ ಪ್ರೆಸ್ ಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಈ ಯೋಜನೆಯಡಿ ಮಹಿಳೆಯರು, ಮಂಗಳಮುಖಿಯರಿಗೆ ವಯಸ್ಸು ಅಥವಾ ಆದಾಯದ ಮಿತಿ ಇರುವುದಿಲ್ಲ. ಉಚಿತ ಪ್ರಯಾಣಕ್ಕೆ ಮಹಿಳೆಯರು ಯಾವುದೇ ಸ್ಮಾರ್ಟ್ ಕಾರ್ಡ್ ಅಥವಾ ಗುರುತು ಚೀಟಿ ತೋರಿಸುವ ಅಗತ್ಯ ಇಲ್ಲ. 

ಕಾಸರಗೋಡು ಜಿಲ್ಲೆಯಿಂದ ಮಂಗಳೂರು, ಪುತ್ತೂರು, ಸುಳ್ಯ ಭಾಗಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್ಸುಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಕಾಸರಗೋಡಿನಿಂದ ಮಂಗಳೂರಿಗೆ ಪ್ರತಿದಿನ ಶಿಕ್ಷಣ, ಉದ್ಯೋಗ, ಚಿಕಿತ್ಸಾ ಸೌಲಭ್ಯಕ್ಕಾಗಿ ತೆರಳುವ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರಿಗೆ ಇದರಿಂದ ಆರ್ಥಿಕ ಉಳಿತಾಯದ ಲಾಭ ಸಿಗಲಿದೆ

ಕನ್ನಡಿಗರಿಗೆ ಲಾಭ..

ಕರ್ನಾಟಕದ ಶಕ್ತಿ ಯೋಜನೆಯ ಟಿಕೆಟ್‌ನಲ್ಲಿ ಕರ್ನಾಟಕದ ಯಾವುದೇ ಮೂಲೆಯಿಂದ ಸುಳ್ಯ, ಪುತ್ತೂರಿಗೆ ಬಂದರೂ ಅಲ್ಲಿಂದ ಕಾಸರಗೋಡಿಗೆ ಉಚಿತವಾಗಿ ತೆರಳಬಹುದು.

ಕೇವಲ ಮಂಗಳೂರು-ಕಾಸರಗೋಡು ಮಾರ್ಗದಲ್ಲೇ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 139 ಟ್ರಿಪ್‌ಗಳು ಸಂಚರಿಸುತ್ತವೆ


ಪ್ರವಾಸಿಗರಿಗೂ..

ಪ್ರವಾಸಿಗರಿಗೂ ಈ ಯೋಜನೆ ಲಾಭವಾಗಿದೆ. ಕಾಸರಗೋಡು ಹಾಗೂ ಸುತ್ತಮುತ್ತಲಿನ  ಬೇಕಲ ಕೋಟೆ, ಅನಂತಪುರ ಸರೋವರ ದೇವಾಲಯ, ರಾಣಿಪುರಂ ಗಿರಿಧಾಮ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ, ಕಪ್ಪಿಲ್ ಬೀಚ್‌ಗಳಿಗೆ ಉಚಿತವಾಗಿ ಪ್ರಯಾಣಿಸಬಹುದು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article