ನಾಲ್ಕು ದಶಕಗಳ ಪಯಣಕ್ಕೆ ಸಾಕ್ಷಿಯಾದ ಎಕ್ಸ್‌ಪರ್ಟ್ ಹಳೆ ವಿದ್ಯಾರ್ಥಿಗಳ ಸಮಾಗಮ

ನಾಲ್ಕು ದಶಕಗಳ ಪಯಣಕ್ಕೆ ಸಾಕ್ಷಿಯಾದ ಎಕ್ಸ್‌ಪರ್ಟ್ ಹಳೆ ವಿದ್ಯಾರ್ಥಿಗಳ ಸಮಾಗಮ


ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠತೆಯ ಹೆಗ್ಗುರುತಾಗಿ ಗುರುತಿಸಿಕೊಂಡಿರುವ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು ಮೊದಲ ಬಾರಿಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಸಂಭ್ರಮಿಸಿತು.


`Reconnect, Relive, Reunite' ಎಂಬ ಧ್ಯೇಯದಡಿ ಮಂಗಳೂರು ನಗರದ ಹೊಟೇಲ್ ಓಷನ್ ಪರ್ಲ್‌ನಲ್ಲಿ ಆಯೋಜಿಸಲಾದ ಸಮಾಗಮದಲ್ಲಿ 1986ರಿಂದ 2008ರವರೆಗಿನ ಕೋಚಿಂಗ್ ಬ್ಯಾಚ್‌ಗಳಲ್ಲಿ ಅಧ್ಯಾಯನ ಮ್ಮಾಡಿರುವ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಿದರು.


ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಹಿರಿಯ ಅಧ್ಯಾಪಕರನ್ನು ಒಂದೆಡೆ ಸೇರಿಸಿದ ಈ ಕಾರ್ಯಕ್ರಮವು ಸಮಾಗಮಕ್ಕೆ ಸಾಕ್ಷಿ ಆಯಿತು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 1986ರಲ್ಲಿ ತಮ್ಮ ಸಹೋದರ ಸಿಎ ಎಸ್.ಎಸ್. ನಾಯಕ್ ಅವರೊಂದಿಗೆ ಆರಂಭಿಸಿದ ಎಕ್ಸ್‌ಪರ್ಟ್ ಕೋಚಿಂಗ್ ತರಗತಿಗಳ ಪಯಣವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮೀರಿಸಿ ಸಾಧನೆ ಮಾಡುವುದೇ ಶಿಕ್ಷಕರಿಗೆ ದೊರೆಯುವ ಅತ್ಯುನ್ನತ ಸಂತೃಪ್ತಿ ಎಂದು ಅಭಿಪ್ರಾಯಪಟ್ಟ ಅವರು, ಪರಿಶ್ರಮ, ನಿರಂತರ ಪ್ರಯತ್ನ ಹಾಗೂ ವಿವೇಚನಾಯುಕ್ತ ನಿರ್ಧಾರಗಳ ಮೂಲಕ ಯಶಸ್ಸು ಸಾಧಿಸುವಂತೆ ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್ ಅವರು ಎಕ್ಸ್‌ಪರ್ಟ್ ಸಂಸ್ಥೆಯ ನಾಲ್ಕು ದಶಕಗಳ ಬೆಳವಣಿಗೆ, ಸಾಧನೆ ಹಾಗೂ ವಿಸ್ತರಣೆಯ ಹಾದಿಯನ್ನು ಅನಾವರಣಗೊಳಿಸಿದರು. ಸಣ್ಣ ಕೋಚಿಂಗ್ ಕೇಂದ್ರವಾಗಿ ಆರಂಭಗೊಂಡ ಸಂಸ್ಥೆ ಇಂದು ಕರ್ನಾಟಕದ ಮುಂಚೂಣಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿರುವ ಪಯಣವನ್ನು ಅವರು ಪರಿಚಯಿಸಿದರು.


ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ‘ಎಕ್ಸ್‌ಪರ್ಟ್‌ನ ಪಯಣ ಅಥವಾ ಎಕ್ಸ್‌ಪರ್ಟ್‌ನೊಂದಿಗಿನ ನನ್ನ ಪಯಣ’ ವಿಷಯದ ಕುರಿತು ಮಾತನಾಡಿ, ವಿದ್ಯಾರ್ಥಿನಿ, ಅಧ್ಯಾಪಕಿ ಹಾಗೂ ಉಪಾಧ್ಯಕ್ಷೆಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. 2007ರಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಆರಂಭ ಹಾಗೂ 2014ರಲ್ಲಿ ವಳಚ್ಚಿಲ್ ಕ್ಯಾಂಪಸ್ ಸ್ಥಾಪನೆಯಂತಹ ಮಹತ್ವದ ಮೈಲಿಗಲ್ಲುಗಳನ್ನು ಸ್ಮರಿಸಿದ ಅವರು, 52 ವಿದ್ಯಾರ್ಥಿಗಳಿದ್ದ ಒಂದು ತರಗತಿಯಿಂದ ಆರಂಭವಾದ ಎಕ್ಸ್‌ಪರ್ಟ್ ಇಂದು 52 ತರಗತಿಗಳನ್ನು ಹೊಂದಿರುವ ವಿಶಾಲ ಶೈಕ್ಷಣಿಕ ಆವರಣವಾಗಿ ಬೆಳೆದಿದೆ ಎಂದು ಹೇಳಿದರು. ಈ ಸಾಧನೆಯ ಹಿಂದೆ ಎಕ್ಸ್‌ಪರ್ಟ್ ತಂಡದ ಸಮರ್ಪಣೆ ಹಾಗೂ ಹಲವು ತಲೆಮಾರುಗಳ ವಿದ್ಯಾರ್ಥಿಗಳ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

2004-06ರ ಬ್ಯಾಚ್‌ನ ಹಳೆ ವಿದ್ಯಾರ್ಥಿ ಹಾಗೂ ಶ್ರೀ ಮೃತ್ಯುಂಜಯ ಹೆಲ್ತ್ ಕೇರ್ ಮತ್ತು ದಾವಣಗೆರೆ ಚೈಲ್ಡ್ ಕೇರ್ ಆಸ್ಪತ್ರೆಗಳ ಸಂಸ್ಥಾಪಕ ಡಾ. ಶಿವಬಸವ ಸ್ವಾಮಿ ಅವರು ‘ಎಕ್ಸ್‌ಪರ್ಟ್ ಸೇವಾ ದಿವಸ್’ ಪರಿಕಲ್ಪನೆಯನ್ನು ಪರಿಚಯಿಸಿ, ಸಂಸ್ಥೆಯ ಸಾಮಾಜಿಕ ಸೇವಾ ಚಟುವಟಿಕೆಗಳು ಮತ್ತು ಸಮುದಾಯಮುಖಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ‘ನಾವಿಂದು ಏನಾಗಿದ್ದೇವೆಯೋ ಅದಕ್ಕೆ ಎಕ್ಸ್‌ಪರ್ಟ್ ಕಾರಣ’ ಎಂದು ಹೇಳಿದ ಅವರು, ಗಂಗಾನದಿಯು ಲಕ್ಷಾಂತರ ಜೀವಗಳಿಗೆ ಜೀವನಾಡಿಯಾಗಿರುವಂತೆ ಎಕ್ಸ್‌ಪರ್ಟ್ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದೆ ಎಂದು ಅಭಿಪ್ರಾಯಪಟ್ಟರು.

ಮುಂಬರುವ ಸುವರ್ಣ ಮಹೋತ್ಸವವನ್ನು ಉಲ್ಲೇಖಿಸಿದ ಅವರು, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಮೂಲಕ ಮಾತೃಸಂಸ್ಥೆಗೆ ಗೌರವ ಸಲ್ಲಿಸುವಂತೆ ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಸ್ತುತ ಎಕ್ಸ್‌ಪರ್ಟ್‌ನ ಹಳೆ ವಿದ್ಯಾರ್ಥಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ವೈದ್ಯರು ಹಾಗೂ 60 ಸಾವಿರಕ್ಕೂ ಅಧಿಕ ಎಂಜಿನಿಯರ್‌ಗಳಿದ್ದು, ಅವರ ಸೇವೆ ಲಕ್ಷಾಂತರ ಜನರ ಬದುಕಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ತಿಳಿಸಿದರು. ತಮ್ಮ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿ ಪ್ರತಿ ತಿಂಗಳ 29ರಂದು ಉಚಿತ ಹೆರಿಗೆ ಸೇವೆಗಳನ್ನು ನೀಡಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.

‘ಡೌನ್ ದ ಮೆಮೊರಿ ಲೇನ್’ ಕಾರ್ಯಕ್ರಮವು ಸಮಾರಂಭದ ಭಾವನಾತ್ಮಕ ಘಟ್ಟವಾಗಿ ಮೂಡಿಬಂದಿತು. ಹಳೆಯ ಛಾಯಾಚಿತ್ರಗಳು, ವಿದ್ಯಾರ್ಥಿ ಜೀವನದ ಸ್ಮರಣೀಯ ಘಟನೆಗಳು ಹಾಗೂ ಮೈಲಿಗಲ್ಲುಗಳನ್ನು ಮರುಸ್ಮರಿಸಿದ ಹಳೆ ವಿದ್ಯಾರ್ಥಿಗಳು ಭಾವನಾತ್ಮಕ ಕ್ಷಣಗಳನ್ನು ಅನುಭವಿಸಿದರು. ಖ್ಯಾತ ರುಮಟಾಲಜಿಸ್ಟ್ ಹಾಗೂ ಮಾಜಿ ಸಿಇಟಿ ಪ್ರಥಮ ರ‍್ಯಾಂಕ್ ವಿಜೇತ ಡಾ. ಸಜ್ಜನ್ ಶೆಣೈ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಸ್ಥೆಯು ಬಿತ್ತಿದ ಮೌಲ್ಯಗಳನ್ನು ಸ್ಮರಿಸಿದರು. ಈ ಸಮ್ಮಿಲನವು ಕೇವಲ ಹಳೆ ವಿದ್ಯಾರ್ಥಿಗಳ ಪುನರ್ಮಿಲನವಲ್ಲದೆ, ಸಂಸ್ಥೆ ಮತ್ತು ಹಳೆ ವಿದ್ಯಾರ್ಥಿಗಳ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ ಮಹತ್ವದ ಘಟ್ಟವಾಗಿ ದಾಖಲಾಗಿದೆ.

ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಣ, ಉದ್ಯಮ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಗಣ್ಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಎ ಎಸ್.ಎಸ್. ನಾಯಕ್, ಸಿಎ ಶ್ರೀನಿವಾಸ್ ಕಾಮತ್, ಡಾ. ಜೋಸ್ಟಲ್ ಪಿಂಟೋ, ಮಹೇಶ್ ಕಾಮತ್, ವಿನೋದ್ ಎ.ಆರ್. ಪಿಂಟೋ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಹಾಗೂ ಹಳೆ ವಿದ್ಯಾರ್ಥಿನಿಯೂ ಆಗಿರುವ ದೀಪಿಕಾ ಎ. ನಾಯಕ್ ಮತ್ತು ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುಂಪು ಛಾಯಾಚಿತ್ರ ಹಾಗೂ ಸ್ನೇಹಭೋಜನದೊಂದಿಗೆ ಸಮಾರಂಭವು ಸಮಾಪ್ತಿಗೊಂಡಿತು. ಈ ಐತಿಹಾಸಿಕ ಸಮ್ಮಿಲನವು ಹಳೆ ವಿದ್ಯಾರ್ಥಿಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರೊಂದಿಗೆ, ಭವಿಷ್ಯದಲ್ಲಿ ಸಂಸ್ಥೆಯ ಬೆಳವಣಿಗೆ ಮತ್ತು ದೂರದೃಷ್ಟಿಯ ಗುರಿಗಳಿಗೆ ಪೂರಕವಾಗುವ ಬಲಿಷ್ಠ ಹಳೆ ವಿದ್ಯಾರ್ಥಿಗಳ ಜಾಲ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿತು. ನಾಲ್ಕು ದಶಕಗಳ ಎಕ್ಸ್‌ಪರ್ಟ್ ಪಯಣಕ್ಕೆ ಸಾಕ್ಷಿಯಾದ ಈ ಸಮಾಗಮವು ಸಂಸ್ಥೆ ಮತ್ತು ಹಳೆ ವಿದ್ಯಾರ್ಥಿಗಳ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ ಮಹತ್ವದ ಮೈಲಿಗಲ್ಲಾಗಿ ಮೂಡಿಬಂದಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article