ಕಾಂಗ್ರೆಸ್ ಅಧಿಕಾರ ಹಸ್ತಾಂತರ ಪ್ರಹಸನದಿಂದ ಆಡಳಿತ ಸ್ತಬ್ಧ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಸಂಘನಿಕೇತನದಲ್ಲಿ ಸೋಮವಾರ ಎರಡು ದಿನಗಳ ದ.ಕ. ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗ, ದಲಿತರ ಬಗ್ಗೆ ಕಾಂಗ್ರೆಸ್ ಸದಾ ಮಾತನಾಡುತ್ತಿದೆ. ಆದರೆ, ರಾಜ್ಯದಲ್ಲಿ 1.5 ಲಕ್ಷ ದಲಿತ, ಹಿಂದುಗಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್ ಇಲ್ಲದೆ ಪರದಾಡುತ್ತಿದ್ದಾರೆ. ಕೆಲವರು ಶಾಲೆ ಬಿಟ್ಟು ಹೋಗಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರ ಸರಕಾರ ಎಸ್‌ಸಿ ಎಸ್‌ಟಿಗಳ ಆರೋಗ್ಯ, ಶಿಕ್ಷಣಕ್ಕಾಗಿ ಮೀಸಲಿಟ್ಟ 60 ಸಾವಿರ ಕೋಟಿ ರೂ. ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದೆ. ಕರಾವಳಿಯ ಕಡಲತಡಿಯ ಮೀನುಗಾರಿಕೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರಕಾರ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಈ ಯೋಜನೆಗಳು ರಾಜ್ಯ ಸರಕಾರಕ್ಕೆ ಹಣ ಮಾಡುವ ದಂಧೆಯಾಗಿದೆ. ಕೇಂದ್ರ ಸರಕಾರದ ಅನುದಾನವನ್ನು ರಾಜ್ಯ ಸರಕಾರ ತನ್ನ ಹಣವೆಂದು ಬಿಂಬಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಚಾರಗಳ ಬಗ್ಗೆ ಜನಪರ ಹೋರಾಟಗಳ ಮೂಲಕ ಬಿಜೆಪಿ ಕಾರ್ಯಕರ್ತರು ಜನತೆಗೆ ಸತ್ಯ ತಿಳಿಸಬೇಕು ಎಂದರು.
ದೇಶದಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು 23 ಸಾವಿರಕ್ಕೂ ಹೆಚ್ಚು ಇತ್ತು. ಈ ಪೈಕಿ ದೇಶ ಮೊದಲು ಎಂಬ ನೆಲೆಯಲ್ಲಿ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸುವುದು ಬಿಜೆಪಿ ಮಾತ್ರ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿ ಮಂಡಲ, ಜಿಲ್ಲೆಯಲ್ಲಿ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ಪ್ರಸ್ತುತ ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಜಿರಳೆಗಳಿಗೆ ಹೆದರುವ ಕಾಲ ಇದಲ್ಲ. ದೇಶದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟ ಕಾಲವೊಂದಿತ್ತು. ಇಂದು ಭಾರತ 60 ರಾಷ್ಟ್ರಗಳಿಗೆ ಸಾಲ ನೀಡುತ್ತಿದೆ. ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಕಾಲ ಇದಲ್ಲ. ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, 2014ರ ಬಳಿಕ ಭಾರತ ಬದಲಾಗಿದೆ. ಜನರ ಸಮಸ್ಯೆಗಳಿಗೆ ಉತ್ತರವಾಗಿ ಬಿಜೆಪಿ ದೇಶದಲ್ಲಿದೆ. ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬಂತಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮೇಲಿನ ಜನರ ಆಕ್ರೋಶಕ್ಕೆ ವೇದಿಕೆಯಾಗಿ ಬಿಜೆಪಿ ಕಾರ್ಯನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ಕರ್ನಾಟಕ ನಿರ್ಮಾಣಕ್ಕೆ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೊಳ್ಳಬೇಕು ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಕ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ, ಕಿಶೋರ್ ಕುಮಾರ್ ಪುತ್ತೂರು, ಪ್ರಶಿಕ್ಷಣ ವಿಭಾಗ ಸಂಚಾಲಕ ಉದಯಕುಮಾರ್ ಶೆಟ್ಟಿ, ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಶಿಕ್ಷಣ ಮಹಾ ಅಭಿಯಾನ ಸಂಚಾಲಕ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಶಿಕ್ಷಣ ಸಹ ಸಂಚಾಲಕ ನಿತೀಶ್‌ಕುಮಾರ್ ಶಾಂತಿವನ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.