ಕರ್ಣಾಟಕ ಬ್ಯಾಂಕ್: ವಾರ್ಷಿಕ ಲೆಕ್ಕಪರಿಶೋಧಕರ ಸಮ್ಮೇಳನ
‘ಮುನ್ನೆಚ್ಚರಿಕೆ, ಬಲಪಡಿಕೆ, ತಡೆಗಟ್ಟಿಕೆ” ಎಂಬ ಘೋಷ ವಾಕ್ಯದಡಿ ಹಮ್ಮಿಕೊಳ್ಳಲಾದ ಈ ಸಮ್ಮೇಳನವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಲೆಕ್ಕಪರಿಶೋಧಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದರು.
ಸಮ್ಮೇಳನವು ಲೆಕ್ಕಪರಿಶೋಧನಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದು, ಅಪಾಯ ನಿರ್ವಹಣೆಯನ್ನು ಸುಧಾರಿಸುವುದು, ನಿಯಂತ್ರಣಾತ್ಮಕ ಅನುಸರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಆಂತರಿಕ ನಿಯಂತ್ರಣ ಮತ್ತು ಆಡಳಿತ ವ್ಯವಸ್ಥೆಯ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವ ಪ್ರಮುಖ ವೇದಿಕೆಯಾಯಿತು.
ಬ್ಯಾಂಕ್ ಆಡಿಟ್ ಸಮಿತಿಯ ಅಧ್ಯಕ್ಷ ಕೆ. ಗುರುರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅತಿಥಿಯಾಗಿ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಕೀಲ ಎಂ.ಆರ್. ವೆಂಕಟೇಶ್ ಭಾಗವಹಿಸಿ, ಲೆಕ್ಕಪರಿಶೋಧನೆ ಮತ್ತು ನಿಯಂತ್ರಣ ಕ್ಷೇತ್ರದ ಹೊಸ ಸವಾಲುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಮಾತನಾಡಿ, ಬ್ಯಾಂಕಿನ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಶಾಶ್ವತ ಬೆಳವಣಿಗೆಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ ನಂದನ್ ರಾವ್ ಇಡ್ಯಾ ಅವರು ಬದಲಾಗುತ್ತಿರುವ ಲೆಕ್ಕಪರಿಶೋಧನಾ ಪದ್ಧತಿಗಳು ಹಾಗೂ ಆಡಳಿತ ಮಾನದಂಡಗಳ ಕುರಿತು ಮಾಹಿತಿ ನೀಡಿದರು. ಬ್ಯಾಂಕಿನ ಆಂತರಿಕ ಲೆಕ್ಕಪರಿಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಮುಖ್ಯ ಜಾಗೃತಾಧಿಕಾರಿ ಜಯನಗರಾಜ ರಾವ್ ಎಸ್. ಅವರು ಬ್ಯಾಂಕಿನ ಬೆಳವಣಿಗೆ ಮತ್ತು ಅನುಸರಣೆ ಗುರಿಗಳಿಗೆ ಬಲವಾದ ಲೆಕ್ಕಪರಿಶೋಧನಾ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದರು.
ದೇಶದ ವಿವಿಧ ಪ್ರದೇಶಗಳಿಂದ ಸಮಕಾಲೀನ ಮತ್ತು ಆಂತರಿಕ ಲೆಕ್ಕಪರಿಶೋಧಕರು, ಪ್ರಾದೇಶಿಕ ಮುಖ್ಯಸ್ಥರು, ಉಪ ಪ್ರಾದೇಶಿಕ ಮುಖ್ಯಸ್ಥರು ಹಾಗೂ ಶಾಖಾ ಮುಖ್ಯಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.