ಅನುವಾದಿತ ಕೃತಿ ‘ನುಡಿ ಚಮ್ಮಾಳಿಗೆ’ ಬಿಡುಗಡೆ
ಜೀರುಂಡೆ ಪ್ರಕಾಶನ, ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ‘ನುಡಿ ಚಮ್ಮಾಳಿಗೆ’ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಅವರು “ಈ ಕೃತಿಯನ್ನು ಓದುವಾಗ ಇದು ಎಂಡ್ಲೂರಿ ಸುಧಾಕರ್ ಅವರ ತೆಲುಗು ಕೃತಿ ಎಂದು ಅನ್ನಿಸುವುದಿಲ್ಲ. ವಿಕಾಸ್ ಆರ್ ಅವರು ಇದನ್ನು ಕನ್ನಡದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಅತ್ಯುತ್ತಮ ಅನುವಾದ ಕೃತಿಯಾಗಿದೆ. ವಿಕಾಸ್ ಅವರು ಗ್ರಾಂಥಿಕ ಭಾಷೆಯಲ್ಲಿ ಮೊದಲು ಪ್ರಯತ್ನ ಮಾಡಿ ಬಳಿಕ ಗ್ರಾಮ್ಯ ಭಾಷೆಯಲ್ಲಿ ಅನುವಾದಿಸಿದ್ದಾರೆ ಎಂದರು.
ನಿರ್ಲಕ್ಷ್ಯಕ್ಕೆ ಒಳಗಾದ ಮಾದಿಗ ಸಮುದಾಯದ ದಮನಿತ ನುಡಿಗಳು , ಮಾದಿಗ ಸಾಂಸ್ಕೃತಿಕ ಲೋಕದ ಚರಿತ್ರೆ ಈ ಕೃತಿಯಲ್ಲಿ ಇದೆ. ಸಮಾಜದಲ್ಲಿ ನಮ್ಮನ್ನು ಯಾವ ವ್ಯವಸ್ಥೆ ಸೋಲಿಸುತ್ತದೋ ಅದರ ವಿರುದ್ಧ ಪ್ರತಿ ಹೋರಾಟಕ್ಕೆ ಆಧುನಿಕ ಭಾಷೆ , ಪರಿಕಲ್ಪನೆ ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
ಪುಸ್ತಕದ ಬಗ್ಗೆ ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ ಮಾತನಾಡಿದರು. ಸಂತ ಅಲೋಶಿಯಸ್ ಪರಿಗಣಿತ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ದಿನೇಶ್ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಕೃತಿಯ ಅನುವಾದಕರಾದ ವಿಕಾಸ್ ಆರ್ ಮೌರ್ಯ ಜೀರುಂಡೆ ಪುಸ್ತಕ ಪ್ರಕಾಶಕರಾದ ಧನಂಜಯ ಎನ್ ಉಪಸ್ಥಿತರಿದ್ದರು. ಸಾಹಿತಿ ಎಚ್.ಎಂ. ಪೆರ್ನಾಲ್ ಸ್ವಾಗತಿಸಿದರು. ಫಾತಿಮಾ ರಲಿಯಾ ಕಾರ್ಯಕ್ರಮ ನಿರೂಪಿಸಿದರು.