ಕರಾವಳಿಯಲ್ಲಿ ಮಂಕಾದ ಮುಂಗಾರು

ಕರಾವಳಿಯಲ್ಲಿ ಮಂಕಾದ ಮುಂಗಾರು

ಮಂಗಳೂರು: ಕರಾವಳಿಯಾಧ್ಯಂತ ಮುಂಗಾರು ಮಳೆ ತೀವ್ರ ನಿರಾಸೆ ಮೂಡಿಸಿದ್ದು, ಮಂಗಳವಾರ ಪೂರ್ಣ ಪ್ರಮಾಣದ ಬಿಸಿಲಿನ ವಾತಾವರಣ ಕಂಡುಬಂದಿದೆ. ವಾಡಿಕೆಯಂತೆ ಈ ವೇಳೆಗೆ ಆರ್ಭಟಿಸಬೇಕಿದ್ದ ಮಳೆರಾಯ ದಿಢೀರ್ ಹಿನ್ನಡೆ ಅನುಭವಿಸಿದ್ದರಿಂದ, ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ತುಸು ಏರಿಕೆಯಾಗಿದ್ದು ಸಾರ್ವಜನಿಕರು ಸೆಕೆಯಿಂದ ಕಂಗಾಲಾಗಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪ್ರಖರ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಬಿರುಬಿಸಿಲಿನ ನಡುವೆಯೂ ಸಂಜೆ ವೇಳೆಗೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಇನ್ನು ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಜೂನ್ 22ರಿಂದ ಮುಂಗಾರು ಚೇತರಿಕೆ ಸಾಧ್ಯತೆ:

ಪ್ರಸ್ತುತ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ‘ಅತಿ ದುರ್ಬಲ’ ಹಂತ ತಲುಪಿವೆ. ಆದರೆ ಜೂನ್ 22ರಿಂದ ಮುಂಗಾರು ಅಲ್ಪ ಮಟ್ಟಿಗೆ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಸದ್ಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಂಟೆಗೆ 35ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರಕ್ಕೆ ಇಳಿಯುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಮುಂಗಾರು ಅತಿ ದುರ್ಬಲವಾಗಿರುವ ಹಿನ್ನೆಲೆಯಲ್ಲಿ, ಹಗಲು ಹೊತ್ತಿನ ಅಧಿಕ ಬಿಸಿಲಿನ ತಾಪಮಾನದಿಂದಾಗಿ ಸ್ಥಳೀಯವಾಗಿ ಮೋಡಗಳು ಸೃಷ್ಟಿಯಾಗುತ್ತಿವೆ. ಈ ಸ್ಥಳೀಯ ಮೋಡಗಳ ಪ್ರಭಾವದಿಂದಾಗಿ ರಾಜ್ಯದ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಸಂಜೆ ವೇಳೆ ಅನಿರೀಕ್ಷಿತವಾಗಿ ಮಳೆಯಾಗುತ್ತಿದೆ. ಜಾಗತಿಕ ಹವಾಮಾನ ವೈಪರೀತ್ಯದ ಭಾಗವಾಗಿ ‘ಎಲ್ ನಿನೋ’ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವ ವರದಿಗಳಿವೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು, ನವೆಂಬರ್ ತಿಂಗಳಲ್ಲಿ ಅತ್ಯಂತ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇದು ಕರಾವಳಿಯ ಒಟ್ಟಾರೆ ಮಳೆಯ ಪ್ರಮಾಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article