ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ಅಂಕುರ-ವಿದ್ಯಾರ್ಥಿಗಳೇ ಆಳ್ವಾಸ್ ಬ್ರ್ಯಾಂಡ್: ವಿವೇಕ್ ಆಳ್ವ

ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ಅಂಕುರ-ವಿದ್ಯಾರ್ಥಿಗಳೇ ಆಳ್ವಾಸ್ ಬ್ರ್ಯಾಂಡ್: ವಿವೇಕ್ ಆಳ್ವ


ಮೂಡುಬಿದಿರೆ: ಜವಾಬ್ದಾರಿಯನ್ನು ಸ್ವೀಕರಿಸಿದಾಗ ಮಾತ್ರ ಬದುಕಿನಲ್ಲಿ ಸ್ಥಾನಮಾನ ಮತ್ತು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಮನಸ್ಸನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಅಂಕುರ’ ಇಂಡಕ್ಷನ್ ಕಾರ್ಯಕ್ರಮವನ್ನು ಸೋಮವಾರ ಕೃಷಿಸಿರಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

1998ರಲ್ಲಿ 25 ವಿದ್ಯಾರ್ಥಿಗಳು, ಎರಡು ವಿಭಾಗಗಳು ಹಾಗೂ 11 ಅಧ್ಯಾಪಕರೊಂದಿಗೆ ಆರಂಭವಾದ ಆಳ್ವಾಸ್ ಸಂಸ್ಥೆ ಇಂದು 54 ಶೈಕ್ಷಣಿಕ ಕಾರ್ಯಕ್ರಮಗಳು, 122 ತರಗತಿ ಕೊಠಡಿಗಳು, 188 ಶಿಕ್ಷಕರು ಮತ್ತು 3,191 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು. ವಿದ್ಯಾರ್ಥಿಗಳೇ ಸಂಸ್ಥೆಯ ನಿಜವಾದ ಶಕ್ತಿ ಮತ್ತು ಬ್ರ್ಯಾಂಡ್ ಆಗಿದ್ದು, ಪಾಲಕರ ತ್ಯಾಗ ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಕನಸುಗಳ ಜೊತೆಗೆ ಜವಾಬ್ದಾರಿಗಳನ್ನೂ ಹೊತ್ತು ಸಾಗಬೇಕು. ತರಗತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳದೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದ್ದು, ತಂತ್ರಜ್ಞಾನದ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸುರಕ್ಷಿತ ಹಾಗೂ ಪ್ರೇರಣಾತ್ಮಕ ವಾತಾವರಣ ಅಗತ್ಯವಾಗಿದ್ದು, ತರಗತಿ ಕೊಠಡಿಗಳಲ್ಲಿಯೇ ರಾಷ್ಟ್ರದ ಭವಿಷ್ಯ ರೂಪುಗೊಳ್ಳುತ್ತದೆ ಎಂದರು. ಸಕಾರಾತ್ಮಕ ಚಿಂತನೆ ಹೊಂದಿದವರೊಂದಿಗೆ ಬೆರೆಯುವುದು ಹಾಗೂ ನಕಾರಾತ್ಮಕ ಮನೋಭಾವದಿಂದ ದೂರವಿರುವುದು ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪರೀಕ್ಷಾಂಗ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ ಪರೀಕ್ಷಾ ವಿಭಾಗದ ಕಾರ್ಯವೈಖರಿ, ನಿಯಮಗಳು ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದ್ದು, ಕಾಲೇಜು–ಪೋಷಕರ ನಿರಂತರ ಸಂಪರ್ಕ ಸಾಧನೆಗೆ ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ. ರವೀಂದ್ರನ್ ಉಪಸ್ಥಿತರಿದ್ದರು. ಡಾ. ಯೋಗಿಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article