ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಗೆ ಕಲಿಕಾ ಸಾಮಗ್ರಿ ವಿತರಣೆ
Tuesday, June 2, 2026
ಮೂಡುಬಿದಿರೆ: ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ನೆರವಿನೊಂದಿಗೆ ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ರೂ 2 ಲಕ್ಷ ರೂಪಾಯಿ ಮೌಲ್ಯದ ಉಚಿತ ಕಲಿಕಾ ಸಾಮಗ್ರಿಗಳನ್ನು ಮಂಗಳವಾರ ವಿತರಿಸಲಾಯಿತು.
ಶಾಲಾ ಸಂಚಾಲಕ ಜಯಪ್ರಕಾಶ್ ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ದಾನಿಗಳಾದ ಹಳೇ ವಿದ್ಯಾರ್ಥಿ ಚಂದ್ರಕಾಂತ್ ಭಟ್ ಒದಗಿಸಿರುವ ರೂ 50 ಸಾವಿರ ಮೌಲ್ಯದ ವೈಟ್ ಬೋರ್ಡ್ ನ್ನು ಮತ್ತು ಸುಮಾರು 70ವಿದ್ಯಾರ್ಥಿಗಳಿಗೆ ಉಚಿತ ಸ್ಯಾಂಡಲ್ ನ್ನು ಶೃತಿ ಚಂದ್ರಕಾಂತ್ ಭಟ್ ವಿತರಿಸಿದರು. ದಿವಾಕರ್ ಸುವರ್ಣ 35 ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಹಾಗೂ 20 ಜೋಡಿ ಚಪ್ಪಲಿಗಳನ್ನು ಕೊಡುಗೆಯಾಗಿ ನೀಡಿದರು. ಸುಕುಮಾರ್ ಅಮೀನ್ 25 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರ ವಿತರಿಸಿದರು. ಮೂಡುಬಿದಿರೆ ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವಾ ಬ್ಯಾಂಡ್ ಸೆಟ್ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಿದರೆ, ಕಲ್ಲಮುಂಡ್ಕೂರು ನಿಡ್ಡೋಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪಿಂಟೋ ಛತ್ರಿಗಳನ್ನು ವಿತರಿಸಿದರು. ಶಿವಾನಂದ ಸುವರ್ಣ ಸಮವಸ್ತ್ರ ಹಾಗೂ ರೆನ್ವಿಡಾ ಸ್ಕೂಲ್ ಐಡಿ ಕಾರ್ಡ್‌ಗಳನ್ನು ವಿತರಿಸಿದರು.
ಸುಧಾಕರ್ ಸುವರ್ಣ ಮತ್ತು ಸಹೋದರರು ನೋಟ್ ಪುಸ್ತಕಗಳನ್ನು ಹಸ್ತಾಂತರಿಸಿದರು.
ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ವರದರಾಯ ಕಾಮತ್, ಕೃಷ್ಣ ಶೆಟ್ಟಿ, ಪ್ರಮುಖರಾದ ನರಸಿಂಹ ಮಡಿವಾಳ, ನಿಡ್ಡೋಡಿ ಸಂದೀಪ್ ಸುವರ್ಣ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥೆಯ ಸುನಿಲ್ ಮೆಂಡೋನ್ಸಾ, ಡಯಾನ ಶರವೋ, ರಾಕಿ ಮಸ್ಕರನೆಸ್, ರಿಚರ್ಡ್ ಡಿಸೋಜ, ಸೂರ್ಯಕಾಂತ ಭಟ್, ಪ್ರಕಾಶ್ ಮಿರಂದ, ಸಂಜೀವ ಹಾಗೂ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಂಕರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಣಿತ ಶಿಕ್ಷಕಿ ಛಾಯಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಜಯಶ್ರೀ ಕೆ ವಂದಿಸಿದರು. ಶಿಕ್ಷಕರಾದ ಧೀರಜ್ ಜೈನ್ ಸಂಗೀತ, ಸ್ವಾತಿ ರಾಣಿ ಸಹಕರಿಸಿದರು.
