ಸಂತ ಫಿಲೋಮಿನಾ ಕಾಲೇಜಿನಲ್ಲಿ ಟೆಕ್ನಾಲಜಿ ಡೇ ಆಚರಣೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ‘ತಂತ್ರಜ್ಞಾನವು ಸಮಾಜದ ಬೆಳವಣಿಗೆಗೆ ಸಹಕಾರಿಯಾದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ನವೀನತೆ ಎಂದರೆ ಹೊಸ ಯಂತ್ರಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ, ಸಮಾಜಕ್ಕೆ ಉಪಯುಕ್ತವಾದ ಕೊಡುಗಗಳನ್ನು ನೀಡುವುದು. ವಿದ್ಯಾರ್ಥಿಗಳು ಕುತೂಹಲ ಮತ್ತು ಸೃಜನಶೀಲತೆಯಿಂದ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿರುವುದು ಸಂತೋಷಕರ. ಇಂದಿನ ಯುವಪೀಳಿಗೆ ತಂತ್ರಜ್ಞಾನವನ್ನು ಮಿತವಾಗಿ ಬಳಸಿ ನೈತಿಕತೆ ಮತು ಮಾನವೀಯತೆಗಳನ್ನು ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸುವವರಾಗಲಿ ಎಂದು ಹೇಳಿದರು.
ಟೆಕ್ನಾಲಜಿ ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಅವರು ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ತಂತ್ರಜ್ಞಾನವನ್ನು ಕಲಿಯುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಣಕ ವಿಜ್ಞಾನ ವಿಭಾಗದ ಡೀನ್ ಡಾ. ವಿನಯಚಂದ್ರ ಅವರು ಟೆಕ್ನಾಲಜಿ ಡೇ.ಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ತಂತ್ರಜ್ಞಾನವನ್ನು ನವೀನತೆ ಮತ್ತು ಜವಾಬ್ದಾರಿತನದೊಂದಿಗೆ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ಕೇವಲ ಸೈದ್ಧಾಂತಿಕ ಕಲಿಕೆಗೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾಗುವ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಭವಿಷ್ಯದ ನವೋದ್ಯಮಿಗಳು ಹಾಗೂ ಜವಾಬ್ದಾರಿಯುತ ತಾಂತ್ರಿಕ ನಾಯಕರಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಆಧುನಿಕ ತಾಂತ್ರಿಕ ಪರಿಕಲ್ಪನೆಗಳನ್ನು ಉತ್ಸಾಹದಿಂದ ಪ್ರಸ್ತುತಪಡಿಸಿರುವುದನ್ನು ಶ್ಲಾಘಿಸಿದರು.
ತೃತೀಯ ಬಿಸಿಎ(ಎಐ & ಎಂಎಲ್) ವಿದ್ಯಾರ್ಥಿ ಯೂಸುಫ್ ಆಲಿ ಸಲೀಲ್ರವರು ಐಒಟಿ ಬಳಸಿ ತಯಾರಿಸಿದ ಸೋಲಾರ್ ಪವರ್ಡ್ ಕೋಲ್ಡ್ ಸ್ಟೋರೇಜ್ ಮಾದರಿಯ ಬಗ್ಗೆ, ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸುರಭಿ ಸಿ ಹಾಗೂ ದಿಯಾ ಅವರು ವರ್ಚುವಲ್ ರಿಯಾಲಿಟಿಯನ್ನು ಬಳಸಿ ತಯಾರಿಸಿಲಾಗುವ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕಿಯರಾದ ಸೌಮ್ಯ ಹಾಗೂ ಜಯಶ್ರೀ ಹೆಚ್. ಮಾರ್ಗದರ್ಶನ ನೀಡಿದರು.
ಮಧುರಾ ಮತ್ತು ಬಳಗ ಪ್ರಾರ್ಥಿಸಿದರು. ದ್ವಿತೀಯ ಬಿಸಿಎ(ಎಐ & ಎಂಎಲ್)ವಿದ್ಯಾರ್ಥಿನಿ ಶಹನಾಝ್ ಕೆ. ಸ್ವಾಗತಿದರು. ದ್ವಿತೀಯ ಬಿಸಿಎ(ಎಐ & ಎಂಎಲ್)ವಿದ್ಯಾರ್ಥಿನಿ ಅನೀಶಾ ವಂದಿಸಿದರು. ದ್ವಿತೀಯ ಬಿಸಿಎ(ಎಐ & ಎಂಎಲ್)ವಿದ್ಯಾರ್ಥಿನಿ ಶೀತಲ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐಐಸಿ ಘಟಕದ ಸಂಯೋಜಕಿ ಡಾ. ಗೀತಾಪೂರ್ಣಿಮಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.