ಸಿರಿ ಸಂಸ್ಥೆಯ ವತಿಯಿಂದ ಧರ್ಮಸ್ಥಳದ ಎ.ವಿ. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜೂನ್ ತಿಂಗಳಿನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಿರಿ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.
ನಂತರ ಅವರು ಮಾತನಾಡಿ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರು ಮಹಿಳಾ ಸಬಲೀಕರಣದ ಧ್ಯೇಯೋದ್ದೇಶದಿಂದ ಪ್ರಾರಂಭಿಸಿರುವ ಸಿರಿ ಸಂಸ್ಥೆಯಲ್ಲಿ ಎಲ್ಲಾ ಸಿರಿ ಸಿಬ್ಬಂದಿಗಳು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿಯುವ ಮೂಲಕ ಸಿರಿ ಬ್ರ್ಯಾಂಡನ್ನು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುವ ಮೂಲಕ ಪೂಜ್ಯ ದಂಪತಿಗಳ ಕನಸನ್ನು ನನಸಾಗಿಸಬೇಕೆಂದು ಪ್ರೇರಣಾತ್ಮಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಅವರು ಎ.ವಿ. ಶೆಟ್ಟಿ ಮತ್ತು ಅವರ ಧರ್ಮಪತ್ನಿ ಅರುಣ ವಿ. ಶೆಟ್ಟಿ ಅವರನ್ನು ಸ್ವಾಗತಿಸಿದರು. ಬಳಿಕ ಸಿರಿ ಸಂಸ್ಥೆಯ ಸಮಗ್ರ ಏಳಿಗೆಗಾಗಿ ಶ್ರಮವಹಿಸಿ, ಸಂಪೂರ್ಣ ಸಹಕಾರ ನೀಡುತ್ತಾ ಬಂದಿರುವ ಎ.ವಿ. ಶೆಟ್ಟಿ ದಂಪತಿಗಳಿಗೆ ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ಗೌರವಾರ್ಪಣೆ ಸಲ್ಲಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸಿರಿ ಸಿಬ್ಬಂದಿಗಳಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಹೆಗ್ಗಡೆಯವರು ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವಿಡಿಯೋ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಸಿರಿ ಕ್ಲಬ್ ಅಧ್ಯಕ್ಷೆ ಉಷಾ, ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಿರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಸಿರಿ ಸಂಸ್ಥೆಯ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ವಂದಿಸಿದರು.