ವೃದ್ದೆಯ ಕೈಯಿಂದ ಬಳೆ ಕಸಿದು ಪರಾರಿ
ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಉದ್ದದಗುಡ್ಡೆ ಎಂಬಲ್ಲಿ ಮನೆಯೊಂದರಲ್ಲಿ ಒಂಟಿಯಾಗಿದ್ದ 82 ವರ್ಷದ ವೃದ್ದೆಯ ಕೈಯಲ್ಲಿದ್ದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಬಳೆಯನ್ನು ಅಪರಿಚಿತ ವ್ಯಕ್ತಿಯೋರ್ವ ಬಲವಂತವಾಗಿ ಕಸಿದು ಪರಾರಿಯಾದ ಘಟನೆ ನಡೆದಿದೆ.
ಆ.14 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಮಧ್ಯೆ ಹಾಡುಹಗಲೇ ಈ ಘಟನೆ ನಡೆದಿದೆ.ಉದ್ದದ ಗುಡ್ಡೆ ನಿವಾಸಿ ಅವ್ವಮ್ಮ (82) ಅವರು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಏಕಾಏಕಿ ಮನೆಯೊಳಗೆ ಪ್ರವೇಶಿಸಿ ಅವರ ಎರಡೂ ಕೈಗಳಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಬಳೆಗಳನ್ನು ಕಸಿಯುವ ಸಂದರ್ಭದಲ್ಲಿ ಅವ್ವಮ್ಮ ಅವರ ಎಡಕೈಗೆ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅವ್ವಮ್ಮ ಅವರ ಪುತ್ರ ಸಾದಿಕ್ (45) ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.