ಪ್ಲಸ್ ವನ್ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು
Monday, August 17, 2026
ಕಾಸರಗೋಡು: ಕೆರೆಗೆ ಸ್ನಾನಕ್ಕಿಳಿದ ಪ್ಲಸ್ ಒನ್ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡಿನ ಉದಯಗಿರಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ವಿದ್ಯಾನಗರ ಚಾಲ ಮೂಲದ, ಪ್ರಸಕ್ತ ಉದಯಗಿರಿಯಲ್ಲಿ ವಾಸಿಸುತ್ತಿರುವ ಅಬೂಬಕರ್ ಎಂಬವರ ಪುತ್ರ ಮುಹಮ್ಮದ್ ಶಾಹಿಲ್ (15) ಮೃತಪಟ್ಟವನು. ಈತ ನಾಯನ್ಮಾರ್ ಮೂಲ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿಯಾಗಿದ್ದನು.
ಶಾಲೆಗೆ ಹೊರಡುವ ಮುನ್ನ ಶಾಹಿಲ್ ಮನೆ ಸಮೀಪವಿರುವ ಕೆರೆಗೆ ಸ್ನಾನ ಮಾಡಲು ತೆರಳಿದ್ದನು ಎನ್ನಲಾಗಿದೆ. ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಳವಾದ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಶಾಹಿಲ್ ನಾಪತ್ತೆಯಾದುದರಿಂದ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಶಾಹಿಲ್ ಕೊನೆಯುಸಿರೆಳೆದಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.