ಅಜ್ಜಿಯ ಚಿನ್ನದ ಬಳೆ ಕಸಿದ ಮೊಮ್ಮಗನ ಬಂಧನ
Monday, August 17, 2026
ಬಂಟ್ವಾಳ: ಇಲ್ಲಿಗೆ ಸಮೀಪದ ತೆಂಕಕಜೆಕಾರು ಗ್ರಾಮದ ಉದ್ದದಗುಡ್ಡೆ ಎಂಬಲ್ಲಿ ಮನೆಯೊಂದರಲ್ಲಿ ಒಂಟಿಯಾಗಿದ್ದ ಅಜ್ಜಿಯ ಕೈಯಲ್ಲಿ ಚಿನ್ನದ ಬಳೆಯನ್ನು ಕಸಿದು ಪರಾರಿಯಾಗಿದ್ದ ಮೊಮ್ಮಗ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಉದ್ದದಗುಡ್ಡೆ ಎಂಬಲ್ಲಿ ಮನೆಯೊಂದರಲ್ಲಿ ಒಂಟಿಯಾಗಿದ್ದ 82 ವರ್ಷದ ವೃದ್ದೆ ಅವ್ವಮ್ಮ ಅವರ ಕೈಯಲ್ಲಿದ್ದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಬಳೆಯನ್ನು ಕಸಿದ ಮೊಮ್ಮಗ ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿಯಾಗಿದ್ದಾನೆ.
ಆ.14 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಮಧ್ಯೆ ಹಾಡುಹಗಲೇ ಈ ಘಟನೆ ನಡೆದಿದ್ದು,ಆರೋಪಿ ಮೊಮ್ಮಗ ಉದ್ದದ ಗುಡ್ಡೆಯಲ್ಲಿ ತನ್ನ ಅಜ್ಜಿ ಅವ್ವಮ್ಮ ಒಂಟಿಯಾಗಿರುವುದನ್ನು ಖಚಿತಪಡಿಸಿಕೊಂಡು ಏಕಾಏಕಿ ಮನೆಯೊಳಗೆ ಪ್ರವೇಶಿಸಿ ಅವರ ಎರಡೂ ಕೈಗಳಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ.
ಮೊಮ್ಮಗನೇ ಈ ಕೃತ್ಯ ನಡೆಸಿರುವ ಬಗ್ಗೆ ಅಜ್ಜಿಗೆ ಗೊತ್ತಿದ್ದರೂ ಅಪರಿಚಿತ ವ್ಯಕ್ತಿ ಬಳೆ ಕಸಿದಿದ್ದ ಎಂದು ದೂರು ನೀಡುವ ಮೂಲಕ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಲಾಗಿತ್ತೆನ್ನಲಾಗಿದೆ.
ಬಳೆಗಳನ್ನು ಕಸಿಯುವ ಸಂದರ್ಭದಲ್ಲಿ ಅವ್ವಮ್ಮ ಅವರ ಎಡಕೈಗೆ ಗಾಯಕೂಡ ಆಗಿತ್ತು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಪೊಲೀಸರು ಅಜ್ಕಿಯ ಮೊಮ್ಮಗ ಶಬೀರ್ (33) ನನ್ನು ಬಂಧಿಸಿ ಕಸಿದ ಚಿನ್ನದ ಬಳೆಯನ್ನು ವಶಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
