ವಿವಾದಾತ್ಮಕ ರಸಪ್ರಶ್ನೆ ತಯಾರಿಸಿದ ಆರೋಪ: ಶಿಕ್ಷಕ ಸೇವೆಯಿಂದ ಅಮಾನತು

ವಿವಾದಾತ್ಮಕ ರಸಪ್ರಶ್ನೆ ತಯಾರಿಸಿದ ಆರೋಪ: ಶಿಕ್ಷಕ ಸೇವೆಯಿಂದ ಅಮಾನತು

ಕಾಸರಗೋಡು: ಕುಂಬಳೆ ಮತ್ತು ಮಂಜೇಶ್ವರ ಉಪಜಿಲ್ಲೆಗಳ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸ್ವಾತಂತ್ರ್ಯ ರಸಪ್ರಶ್ನೆ’ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಪ್ರಶ್ನೆಗಳನ್ನು ಸೇರಿಸಿದ ಆರೋಪದಲ್ಲಿ ಪಳ್ಳತ್ತಡ್ಕ ಎ.ಯು.ಪಿ. ಶಾಲೆಯ ಶಿಕ್ಷಕ ಗುರುಪ್ರಸಾದ್ ಅವರನ್ನು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಇದರೊಂದಿಗೆ ಶಿಕ್ಷಕನ ವಿರುದ್ಧ ಕಟ್ಟುನಿಟ್ಟಿನ ಇಲಾಖಾ ಶಿಸ್ತು ಕ್ರಮ ಜರುಗಿಸುವಂತೆ ಶಾಲಾ ವ್ಯವಸ್ಥಾಪಕ ಮಂಡಳಿಗೆ ಸೂಚಿಸಲಾಗಿದೆ.

ವಿವಾದ ಸೃಷ್ಟಿಸಿದ 5ನೇ ಪ್ರಶ್ನೆ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಕೂಟದ (ಸೋಷಿಯಲ್ ಸೈನ್ಸ್ ಕ್ಲಬ್) ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಈ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಇದರಲ್ಲಿ ಕೇಳಲಾಗಿದ್ದ ಒಟ್ಟು 15 ಪ್ರಶ್ನೆಗಳ ಪೈಕಿ ೫ನೇ ಪ್ರಶ್ನೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಯಿತು. ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂಬ ಪ್ರಶ್ನೆಗೆ, ವಿ.ಡಿ. ಸಾವರ್ಕರ್ ಅವರ ಹೆಸರನ್ನು ಅಧಿಕೃತ ಉತ್ತರವೆಂದು ಹೆಸರಿಸಲಾಗಿತ್ತು.

ಈ ಪ್ರಶ್ನೆಯು ಇತಿಹಾಸವನ್ನು ತಿರುಚುವ ಪ್ರಯತ್ನ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದ್ದರು.

ಸರ್ಕಾರದ ಸ್ಪಷ್ಟನೆ:

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಸಚಿವರು ತಕ್ಷಣದ ತನಿಖೆಗೆ ಆದೇಶಿಸಿದ್ದರು. ಕಾಸರಗೋಡು ಉಪ ಶಿಕ್ಷಣ ನಿರ್ದೇಶಕರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಶಿಕ್ಷಕ ಗುರುಪ್ರಸಾದ್ ನೇತೃತ್ವದ ತಂಡವೇ ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿರುವುದು ದೃಢಪಟ್ಟಿದೆ.

ಇಲಾಖೆಯ ಅಧಿಕೃತ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮ ಇರಲಿಲ್ಲ ಮತ್ತು ಇದಕ್ಕೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಈ ಪ್ರಕರಣದ ಕುರಿತು ಸರ್ಕಾರದ ಮಟ್ಟದಲ್ಲಿ ಸದ್ಯ ಉನ್ನತ ಮಟ್ಟದ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article