ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್-2026ಕ್ಕೆ ತೆರೆ
ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್-2026ಕ್ಕೆ ಸಮಾರೋಪಗೊಂಡಿದ್ದು, ಮುಕ್ತ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಈಒ ಮಣಿ ಸರ್ಬರ್‌ತೋ ಅವರು 11 ಸುತ್ತಿನಲ್ಲಿ 10.5 ಅಂಕ ಗಳಿಸಿ ಚಾಂಪಿಯನ್ ಆಗಿದ್ದಾರೆ.
ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ದೇಶದ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 644 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಮುಕ್ತ ವಿಭಾಗದಲ್ಲಿ ಮಣಿ ಸರ್ಬರ್‌ತೋ ಮೇಲುಗೈ: ಮುಕ್ತ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಈಒ ಮಣಿ ಸರ್ಬರ್‌ತೋ ಅವರು 11 ಸುತ್ತುಗಳಲ್ಲಿ 10.5 ಅಂಕ ಗಳಿಸಿ ಅಗ್ರಸ್ಥಾನ ಪಡೆದರು.
ಒಡಿಶಾದ ಅಒ ಸಾತ್ವಿಕ್ ಸ್ವಯಿನ್ ಅವರು 9.5 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಮಹಾರಾಷ್ಟ್ರದ ಈಒ ಅದ್ವಿತ್ ಅಮಿತ್ ಅಗರ್ವಾಲ್ 9 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದರು.
ಮಹಾರಾಷ್ಟ್ರದ ಪರ್ವ ಎಚ್. ಹಕನಿ 9 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಕರ್ನಾಟಕದ ಸ್ರಗ್ವಿಧ ಎಸ್. 8.5 ಅಂಕ ಗಳಿಸಿ ಐದನೇ ಸ್ಥಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಕೇರಳದ WCM ದಿವಿ ಬಿಜೇಶ್ 11 ಸುತ್ತಿನಲ್ಲಿ 9.5 ಅಂಕ ಪಡೆದು ಚಾಂಪಿಯನ್ ಆಗಿದ್ದಾರೆ. ದೆಹಲಿಯ ವಂಶಿಕಾ ರಾವತ್ 11 ಸುತ್ತಿನಲ್ಲಿ ಅಂಕ ಪಡೆದು ದ್ವಿತೀಯ ಹಾಗೂ ಮಹಾರಾಷ್ಟ್ರದ ಘೋಲಾಪ್ ಪೃಶಾ 11 ಸುತ್ತಿನಲ್ಲಿ 8.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ನಕ್ಷತ್ರ ಕುಮುಡವಿಲ್ಲಿ 11 ಸುತ್ತಿನಲ್ಲಿ 8.5 ಅಂಕ ಪಡೆದು ಚತುರ್ಥ ಸ್ಥಾನ ಮತ್ತು ಕೇರಳದ ಸಹ್ಯಾ ಕೈಲಾಶ್ 11 ಸುತ್ತಿನಲ್ಲಿ 8.5 ಪಡೆದು ಚತುರ್ಥ ಸ್ಥಾನ ಪಡೆದಿದ್ದಾರೆ.
644 ಕಿರಿಯ ಚೆಸ್ ಪ್ರತಿಭೆಗಳ ಸಮಾಗಮ: ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 644 ಕಿರಿಯ ಚೆಸ್ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿದ್ದು, ಮಂಗಳೂರಿನಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ಗೆ ರಾಷ್ಟ್ರೀಯ ಮಟ್ಟದ ಮಹತ್ವ ದೊರಕಿದೆ.
ಕಿರಿಯ ವಯಸ್ಸಿನಲ್ಲೇ ಚೆಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಅನುಭವ ಪಡೆಯಲು ಈ ಚಾಂಪಿಯನ್‌ಶಿಪ್ ಅವಕಾಶ ಕಲ್ಪಿಸಿದೆ. ದಕ್ಷಿಣ ಕನ್ನಡದಲ್ಲಿ ಚೆಸ್ ಕ್ರೀಡೆಯ ಬೆಳವಣಿಗೆ ಹಾಗೂ ಕಿರಿಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿಯೂ ಈ ಆಯೋಜನೆ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಅಧ್ಯಕ್ಷ ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ರಮ್ಯ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.