‘ಋತು ತಾರೆ’ ಸ್ವಾಗತಾರ್ಹ ಯೋಜನೆ: ಮಮತಾ ಗಟ್ಟಿ

‘ಋತು ತಾರೆ’ ಸ್ವಾಗತಾರ್ಹ ಯೋಜನೆ: ಮಮತಾ ಗಟ್ಟಿ


ಮಂಗಳೂರು: ರಾಜ್ಯ ಸರಕಾರದ ‘ಋತು ತಾರೆ’ ಕಾರ್ಯಕ್ರಮವು ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯ ಸ್ವಚ್ಛತೆ ಮತ್ತು ಆರೋಗ್ಯ ಅರಿವು ಮೂಡಿಸುವ ಮಹತ್ವದ ಉಪಕ್ರಮ. ಮಹಿಳೆಯರ ಮೇಲಿನ ಕಾಳಜಿ ದೃಷ್ಟಿಯಿಂದ ರಾಜ್ಯ ಸರಕಾರ ಆರಂಭಿಸುತ್ತಿರುವ ಈ ಯೋಜನೆ ಸ್ವಾಗತಾರ್ಹ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.

ಋತುಚಕ್ರದ ಕುರಿತು ಇರುವ ಮೂಢನಂಬಿಕೆ, ತಪ್ಪು ಕಲ್ಪನೆ ಮತ್ತು ಮುಜುಗರವನ್ನು ನಿವಾರಿಸಿ, ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಕಿಶೋರಿಯರಿಗೆ ಸುರಕ್ಷಿತ ಹಾಗೂ ಆರೋಗ್ಯಕರ ಮುಟ್ಟಿನ ಸ್ವಚ್ಛತಾ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಮುಟ್ಟಿನ ಕಾರಣದಿಂದ ಅವರ ಶಿಕ್ಷಣ ಮತ್ತು ಶಾಲಾ ಹಾಜರಾತಿಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಬೆಂಬಲ ನೀಡುವುದು ಮುಖ್ಯವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. 

ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯ ಜೊತೆಗೆ ಮೆನ್ಸ್ಟ್ರುವಲ್ ಕಪ್ಗಳಂತಹ ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆ ಸೂಕ್ತ ಅರಿವು ಮೂಡಿಸುವುದೂ ಅಗತ್ಯವಾಗಿದೆ. ಇದರೊಂದಿಗೆ ಮೆನೋಪಾಸ್ ಅಥವಾ ಋತುಬಂಧದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಕೂಡ ಅಗತ್ಯ. ಮೆನೋಪಾಸ್ ಮಹಿಳೆಯರ ಜೀವನದ ಸಹಜ ಹಂತವಾಗಿದ್ದು, ಈ ಸಂದರ್ಭದಲ್ಲಿ ಉಂಟಾಗಬಹುದಾದ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು, ಬಿಸಿ ಹೊಡೆತ, ನಿದ್ರೆಯ ತೊಂದರೆ ಮತ್ತು ಮನಸ್ಥಿತಿಯ ಬದಲಾವಣೆಗಳಂತಹ ಲಕ್ಷಣಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯುವಂತೆ ಮಹಿಳೆಯರನ್ನು ಪ್ರೋತ್ಸಾಹಿಸಬೇಕು ಎಂದರು.

ಪೋಷಕರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಸಮಾಜದ ಸಹಕಾರದೊಂದಿಗೆ ಮುಟ್ಟಿನ ಆರೋಗ್ಯ ಹಾಗೂ ಮಹಿಳೆಯರ ಆರೋಗ್ಯದ ಕುರಿತು ಮುಕ್ತ ಮತ್ತು ವೈಜ್ಞಾನಿಕ ಸಂವಾದವನ್ನು ಬೆಳೆಸಬೇಕಾಗಿದೆ.  ‘ಋತು ತಾರೆ’ ಕೇವಲ ಋತುಚಕ್ರದ ಸ್ವಚ್ಛತೆಯ ಕಾರ್ಯಕ್ರಮವಲ್ಲ, ಕಿಶೋರಿಯರಿಂದ ಹಿಡಿದು ಮೆನೋಪಾಸ್ ಹಂತದ ಮಹಿಳೆಯರವರೆಗೆ ಪ್ರತಿಯೊಬ್ಬರಿಗೂ ಆರೋಗ್ಯ ಗೌರವ, ಅರಿವು ಮತ್ತು ಆತ್ಮವಿಶ್ವಾಸ ಒದಗಿಸುವ ಸಮಗ್ರ ಮಹಿಳಾ ಆರೋಗ್ಯದ ಪ್ರಯತ್ನವಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂಚಲಾಕ್ಷಿ ತೇಜೋಮಯ, ವಿಜಯಲಕ್ಷ್ಮೀ ಶೆಟ್ಟಿ, ಸುಮಾ ಮಾನ್ವಿ, ಪ್ರೇಮಲತಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article