ಮೂಡುಬಿದಿರೆ: ಯಕ್ಷಗಾನವು ಸೌಂದರ್ಯ ಪ್ರಜ್ಞೆಯನ್ನು ಬೆಳೆಸುವ ಕಲೆಯಾಗಿದ್ದು, ದೇಶ, ಸಂಸ್ಕೃತಿ, ಪರಿಸರ ಹಾಗೂ ಸಾಮರಸ್ಯದ ಬದುಕಿನ ಬಗ್ಗೆ ಪ್ರೀತಿ ಮೂಡಿಸುತ್ತದೆ. ಹೊಸ ಪ್ರಯೋಗಗಳಿಗೆ ಅವಕಾಶವಿದ್ದರೂ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅದರ ತತ್ವಗಳನ್ನು ಉಳಿಸಿಕೊಂಡೇ ಮುಂದುವರಿಯಬೇಕು. ಇಲ್ಲವಾದರೆ ಯಕ್ಷಗಾನದ ಹೆಸರಿನಲ್ಲಿ ನಡೆಯುವ ಪ್ರದರ್ಶನಗಳು ಅದರ ಮೂಲ ಸ್ವರೂಪವನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಅಭಿಪ್ರಾಯಪಟ್ಟರು.
ಅವರು ಯುಎಇ ಹಾಗೂ ಮಧ್ಯಪ್ರಾಚ್ಯದ ಮೊದಲ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತನ್ನ 11ನೇ ವರ್ಷದ ಅಂಗವಾಗಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಯಕ್ಷಗಾನ ಕಾರ್ಯಕ್ರಮ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ 75ನೇ ಜನ್ಮಸಂವತ್ಸರದ ಅಂಗವಾಗಿ ಏಪ೯ಡಿಸಿದ ಗೌರವಾಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಯುಎಇಯಲ್ಲಿ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಹಾಗೂ ತಂಡದ ಕಾರ್ಯ ಶ್ಲಾಘನೀಯವಾಗಿದೆ. ದುಬೈಯಂತಹ ನಗರದಲ್ಲಿ ಸ್ಥಳೀಯ ಶಿಕ್ಷಣ ವ್ಯವಸ್ಥೆಯ ನಡುವೆಯೇ ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಯಕ್ಷಗಾನದ ಸಮಗ್ರ ಶಿಕ್ಷಣ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ 2015ರಲ್ಲಿ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಪರಿಕಲ್ಪನೆಯಲ್ಲಿ ಆರಂಭಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಸಮಗ್ರ ಯಕ್ಷಗಾನ ಶಿಕ್ಷಣ ನೀಡುತ್ತಿರುವ ಮೊದಲ ಕೇಂದ್ರವಾಗಿದೆ. ಯಕ್ಷಗಾನದ ವಿವಿಧ ವಿಭಾಗಗಳ ತರಬೇತಿಯೊಂದಿಗೆ ಮಕ್ಕಳಿಗೆ ಕನ್ನಡ ಭಾಷೆ, ಭಾರತೀಯ ಸಂಸ್ಕೃತಿ ಹಾಗೂ ಹಬ್ಬ–ಹರಿದಿನಗಳ ಪರಿಚಯ ನೀಡಲಾಗುತ್ತಿದೆ. ಯಕ್ಷಗಾನ ಅಕಾಡೆಮಿ ಪಠ್ಯಕ್ರಮದಂತೆ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ‘ಅಹ್ಲಾನ್ ಮೋದಿ 2024’ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಗಡಿನಾಡ ಕನ್ನಡಿಗರ ರಾಜ್ಯೋತ್ಸವ ಪ್ರಶಸ್ತಿಗೂ ಕೇಂದ್ರ ಭಾಜನವಾಗಿದ್ದು, ದಾನಿಗಳು, ಕಾರ್ಯಕರ್ತರು ಹಾಗೂ ಮಾಧ್ಯಮಗಳ ಸಹಕಾರದಿಂದ ವಿದೇಶದಲ್ಲಿ ಕನ್ನಡ ಸಂಸ್ಕೃತಿ ಮತ್ತು ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬಹು ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್, ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕರು ವಾಸುದೇವ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.
ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಸಂಯೋಜಕ ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ವಿರಚಿತ ‘ಮೋಹಿನೀ ಏಕಾದಶಿ’ ಯಕ್ಷಗಾನ ಪ್ರಸಂಗವನ್ನು ದುಬೈ ಹಾಗೂ ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಹಿರಿಯ–ಕಿರಿಯ ಕಲಾವಿದರು ಪ್ರದರ್ಶಿಸಿದರು. ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ನಿರ್ದೇಶನ ನೀಡಿದ್ದು, ಶರತ್ ಕುಡ್ಲ ನಾಟ್ಯ ಸಂಯೋಜನೆ ಮಾಡಿದ್ದರು.
ಹಿಮ್ಮೇಳದಲ್ಲಿ ದೇವಿಪ್ರಸಾದ ಆಳ್ವ ತಲಪಾಡಿ, ದೇವರಾಜ ಆಚಾರ್ಯ ಐಕಳ, ದಯಾನಂದ ಶೆಟ್ಟಿಗಾರ್ ಮಿಜಾರು, ಮಯೂರ್ ನಾಯ್ಕ, ಮನ್ವಿತ್ ಎಸ್. ಪದ್ಮಶಾಲಿ ಹಾಗೂ ವಿಶ್ವೇಶ್ ಶೆಟ್ಟಿಗಾರ್ ಅತಿಥಿ ಕಲಾವಿದರಾಗಿ ಭಾಗವಹಿಸಿದರು. ಐಶಾನಿ ದೀಪಕ್ ಸುಳ್ಯ ಹಿಮ್ಮೇಳ ಗಾಯನ ನೀಡಿದರು. ಸವಿನಯ ನೆಲ್ಲಿತೀರ್ಥ, ಭವಾನಿಶಂಕರ ಶರ್ಮ, ವೆಂಕಟೇಶ ಶಾಸ್ತ್ರಿ, ಕೃಷ್ಣಪ್ರಸಾದ್ ರಾವ್ ಚೆಂಡೆ–ಮದ್ದಳೆ ನಿರ್ವಹಿಸಿದರೆ, ಚಂದ್ರಮೋಹನ್ ಚಕ್ರತಾಳ ನಿರ್ವಹಿಸಿದರು.
ಮುಮ್ಮೇಳದಲ್ಲಿ ಅಥರ್ವ್, ಅದ್ರಿತ್, ಅಯಾನ್, ಆದಿತ್, ಆರುಷ್, ಐಶಾನಿ, ಚರಣ್ ರಾಜ್, ದಿಯ, ದಿಶಾನಿ, ನಯೋಮಿ, ನೀಲೇಶ್, ಪವಿತ್ರ, ಪ್ರಿಷಾ, ಭಾರತಿ, ವಿವಾನ್, ವಿಶಿಷ್ಟ, ವೈದೇಹಿ, ವೈಷ್ಣವಿ, ಶರಣ್ಯ, ಶೈವಿ, ಶ್ರೇಯ, ಸತೀಶ್, ಸಾಗರ್, ಸಾತ್ವಿಕ್ ಕೊಂಚಾಡಿ, ಸಾತ್ವಿಕ್ ಸಂತೋಷ್, ಸಾನ್ವಿ ಮೋಹನ್, ಸಾನ್ವಿ ಲಕ್ಷ್ಮೀಶ, ಸೌರಭ್, ಹೃಷೀಕೇಶ, ವಾಸು ಬಾಯಾರು, ವಿಶ್ವೇಶ್ ಹಾಗೂ ಯಜೇಶ್ ಅಭಿನಯಿಸಿದರು.
ರಂಗ ನಿರ್ವಹಣೆಯನ್ನು ದೀಪಕ್ ಕಡೆಂಜ, ಲಕ್ಷ್ಮೀಶ್ ಕೋಟ್ಯಂಕರ್, ಸೌಮ್ಯ ಭಾಸ್ಕರ, ದೀಪಿಕ ಲಕ್ಷ್ಮೀಶ್ ಹಾಗೂ ಪ್ರಭಾಕರ ಪೂಜಾರಿ ವಹಿಸಿದ್ದರು. ಕೇಂದ್ರದ ಪಾಲಕರು, ಪೋಷಕರು, ಸದಸ್ಯರು, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಗುರುಗಳು ಹಾಗೂ ಸಿಬ್ಬಂದಿ ಸಹಕರಿಸಿದ್ದು, ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ವೇಷಭೂಷಣ ಒದಗಿಸಿತು.