ಮಂಗಳೂರು ವಿವಿ 16 ಪಿಜಿ ಕೋರ್ಸ್‌ಗಳು ತಾತ್ಕಾಲಿಕ ಸ್ಥಗಿತ!: ಪ್ರೊ. ಪಿ.ಎಲ್. ಧರ್ಮ
Tuesday, September 29, 2026
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗದ ಹಿನ್ನೆಲೆಯಲ್ಲಿ, ಒಟ್ಟು 16 ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪಿಜಿ ಕೋರ್ಸ್ ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳಿರಬೇಕು. ಆದರೆ ಅನಾಲಿಟಿಕಲ್ ಕೆಮಿಸ್ಟ್ರಿ, ಸೈಬರ್ ಸೆಕ್ಯುರಿಟಿ, ಎಂ.ಎಡ್, ಸಮಾಜಶಾಸ್ತ್ರ, ಎಂ.ಕಾಂ (ಎಚ್‌ಆರ್‌ಡಿ), ಬಯೋಸೈನ್ಸ್, ಪತ್ರಿಕೋದ್ಯಮ (ಎಂಸಿಜೆ), ತುಳು, ಕೊಂಕಣಿ, ಹಿಂದಿ, ಸಂಸ್ಕೃತ, ಸಂಖ್ಯಾಶಾಸ್ತ್ರ, ಪರಿಸರ ವಿಜ್ಞಾನ, ಮೆಟೀರಿಯಲ್ ಸೈನ್ಸ್, ಜಿಯೋಇನ್ಫರ್ಮ್ಯಾಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸ್‌ಗಳಲ್ಲಿ ಅಗತ್ಯ ಪ್ರವೇಶಾತಿ ದೊರೆತಿಲ್ಲ.
ಬೋಧಕ ಸಿಬ್ಬಂದಿಯ ಕೊರತೆ ಹಾಗೂ ಕೇವಲ ಇಬ್ಬರು-ಮೂವರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಕೋರ್ಸ್ ನಡೆಸುವುದು ಕಷ್ಟವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ತುಳು ಎಂಎ ಕೋರ್ಸ್ ಅನ್ನು ನಿಯಮಬಾಹಿರ ಸ್ಥಳದಲ್ಲಿ ನಡೆಸಲು ಅವಕಾಶವಿಲ್ಲದ ಕಾರಣ ವಿವಿಗೆ ಸ್ಥಳಾಂತರಿಸಲಾಗಿದ್ದು, 15 ಮಕ್ಕಳು ದಾಖಲಾದರೆ ಕೋರ್ಸ್ ಆರಂಭವಾಗಲಿದೆ ಎಂದರು.