ಅರ್ಹ ಬೋಧಕರು ಗೈಡ್!

ಅರ್ಹ ಬೋಧಕರು ಗೈಡ್!


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ಬೋಧಕ ಸಿಬ್ಬಂದಿಯ ಕೊರತೆಯಿಂದಾಗಿ ಎದುರಾಗಿರುವ ಪಿಎಚ್.ಡಿ ಮಾರ್ಗದರ್ಶಕರ ಅಭಾವವನ್ನು ನೀಗಿಸಲು, ವಿಶ್ವವಿದ್ಯಾನಿಲಯ ಸಂಯೋಜಿತ ಸರ್ಕಾರಿ ಕಾಲೇಜುಗಳ ಅರ್ಹ ಬೋಧಕ ಸಿಬ್ಬಂದಿಯನ್ನು ಪಿಎಚ್.ಡಿ ಮಾರ್ಗದರ್ಶಕರಾಗಿ (ಗೈಡ್) ಗುರುತಿಸಲು ಯೋಜನೆ ರೂಪಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಸಂಯೋಜಿತ ಕಾಲೇಜುಗಳಲ್ಲಿ ಬೋಧನಾ ಅನುಭವ ಹೊಂದಿರುವ ಶಿಕ್ಷಕರನ್ನು ಪಿಎಚ್.ಡಿ ಮಾರ್ಗದರ್ಶಕರಾಗಿ ಗುರುತಿಸಲು ಅನುಮತಿ ಕೋರಿ ವಿಶ್ವವಿದ್ಯಾನಿಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರಿ ಕಾಲೇಜುಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಸ್ನಾತಕೋತ್ತರ ಕೋರ್ಸ್‌ಗಳಿಗೆ ಬೋಧನೆ ಮಾಡಿದ ಶಿಕ್ಷಕರನ್ನು ಮಾರ್ಗದರ್ಶಕರಾಗಿ ಪರಿಗಣಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ, ಅದರಂತೆ ಅರ್ಹರ ಪಟ್ಟಿ ತಯಾರಿಸಿ ಅಂತಿಮಗೊಳಿಸಲಾಗುವುದು ಎಂದರು.

 ಸೆಮಿಸ್ಟರ್‌ವೈಸ್ ಅಂಕಪಟ್ಟಿ:

ವಿದ್ಯಾರ್ಥಿಗಳಿಗೆ ಭೌತಿಕ (ಫಿಸಿಕಲ್) ಅಂಕಪಟ್ಟಿಗಳನ್ನು ನೀಡುವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡಿದೆ. ಅದರಂತೆ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ನ ಭೌತಿಕ ಅಂಕಪಟ್ಟಿ ಹಾಗೂ ಕೋರ್ಸ್ ಮುಕ್ತಾಯದಲ್ಲಿ ಕ್ರೋಢೀಕೃತ (ಕಾನ್ಸಾಲಿಡೇಟೆಡ್) ಅಂಕಪಟ್ಟಿ ನೀಡಲಾಗುವುದು. ಹಿಂದಿನ ವರ್ಷಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕ್ರೋಢೀಕೃತ ಅಂಕಪಟ್ಟಿಗಳನ್ನು ನೀಡುವುದು ಮುಂದುವರಿಯುತ್ತದೆ. ಆದರೆ, ಕೋರಿಕೆಯ ಮೇರೆಗೆ ಕುಲಸಚಿವರು ಅವರಿಗೆ ಪ್ರಮಾಣೀಕೃತ (ಸರ್ಟಿಫೈಡ್) ಸೆಮಿಸ್ಟರ್‌ವಾರು ಅಂಕಪಟ್ಟಿಗಳನ್ನು ನೀಡಲಿದ್ದಾರೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸಂತೋಷ್ ಜಗಳಾಸರ್, ಕುಲಸಚಿವ (ಮೌಲ್ಯಮಾಪನ) ಡಾ.ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಎಸ್.ಪಂಚಲಿಂಗಸ್ವಾಮಿ ಇದ್ದರು.

ಪಿಎಚ್‌ಡಿ ಪದವಿ ಪ್ರದಾನಕ್ಕೆ ಸಂಬಂಧಿಸಿದ ಪರಿಷ್ಕೃತ ನಿಯಮಾವಳಿ ಅನುಮೋದನೆ:

 ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ರಚಿಸಿದ್ದ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಂಡು ಪಿಎಚ್‌ಡಿ ಪದವಿ ಪ್ರದಾನಕ್ಕೆ ಸಂಬಂಧಿಸಿದ ಪರಿಷ್ಕೃತ ನಿಯಮಾವಳಿಗಳಿಗೆ ಅನುಮೋದನೆ ನೀಡಲಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿಯವರ ನಿರ್ದೇಶನದಂತೆ ಪಿಎಚ್‌ಡಿ ಕಾರ್ಯಕ್ರಮಗಳ ನಿಯಮಾವಳಿಗಳನ್ನು ಸಿದ್ಧಪಡಿಸಲು ಡೀನ್‌ಗಳು ಮತ್ತು ಹಿರಿಯ ಪ್ರಾಧ್ಯಾಪಕರನ್ನೊಳಗೊಂಡ ಸಮಿತಿ ರಚಿಸಿತ್ತು. 

ಹಲವು ಸಭೆಗಳನ್ನು ನಡೆಸಿ ಸಮಿತಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಆಡಳಿತದ ಪರಿಷ್ಕೃತ ನಿಯಮಾವಳಿಗಳು 2022ನ್ನು ಸಿದ್ಧಪಡಿಸಿತು. ಈ ಕರಡಿಗೆ ಶೈಕ್ಷಣಿಕ ಮಂಡಳಿ 2025ರಲ್ಲಿ ಅನುಮೋದನೆ ನೀಡಿ, ಸರ್ಕಾರಕ್ಕೆ ಸಲ್ಲಿಸಿತ್ತು. ನಂತದ ಇದನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸ್ಥಾಯಿ ಸಮಿತಿಯ ಮುಂದೆ ಮಂಡಿಸಲಾಯಿತು. ಸ್ಥಾಯಿ ಸಮಿತಿಯ ಪರಿಶೀಲನಾ ಟಿಪ್ಪಣಿಗಳ ಆಧಾರದ ಮೇಲೆ ಕರಡನ್ನು ಪರಿಷ್ಕರಿಸಿ ಮರುಸಲ್ಲಿಸುವಂತೆ ವಿಶ್ವವಿದ್ಯಾನಿಲಯಕ್ಕೆ ಸೂಚಿಸಲಾಯಿತು. ಅದರಂತೆ, ಸಮಿತಿ ಈ ಶಿಫಾರಸುಗಳನ್ನು ಅಳವಡಿಸಿಕೊಂಡು ಪರಿಷ್ಕೃತ ನಿಯಮಾವಳಿಗಳನ್ನು ಸಲ್ಲಿಸಿದ್ದು, ಇದಕ್ಕೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ.

ಹೊಸ ಕೋರ್ಸ್‌ಗೆ ಅನುಮೋದನೆ:

ಪ್ರೆಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್ನೋವೇಶನ್‌ಗೆ ಬಿಬಿಎ ಇನ್ ಲಾಜಿಸ್ಟಿಕ್ಸ್, ಬಿಸಿಎ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲನಿರ್ಂಗ್ ಹಾಗೂ ಬಿಸಿಎ ಇನ್ ಡೇಟಾ ಅನಾಲಿಟಿಕ್ಸ್ ಕೋರ್ಸ್ ಪ್ರಾರಂಭಿಸಲು ಹೊಸ ಸಂಯೋಜನೆ, ಆಳ್ವಾಸ್ ಕಾಲೇಜಿನಲ್ಲಿ ಪದವಿ ಕೋರ್ಸ್‌ಗಳಲ್ಲಿ ತುಳು ಮತ್ತು ಫ್ರೆಂಚ್ ಭಾಷೆಗಳನ್ನು ಐಚ್ಛಿಕ ವಿಷಯಗಳಾಗಿ ಬೋಧಿಸಲು ಹಾಗೂ ಎಂಬಿಬಿಎ ಇನ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಎಂಸಿಎ ಕಾರ್ಯಕ್ರಮಗಳಿಗೂ ಅನುಮೋದನೆ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಬಿಸಿಎ ಡೇಟಾ ಸೈನ್ಸ್ ಕಾರ್ಯಕ್ರಮಕ್ಕೂ ಅನುಮೋದನೆ, ಈವೆಂಟ್, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಈವೆಂಟ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕಾರ್ಯಕ್ರಮಗಳ ಪಠ್ಯಕ್ರಮಕ್ಕೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article