ಎಂಆರ್‌ಪಿಎಲ್‌ನಲ್ಲಿ ಸ್ಫೋಟ-ಒಬ್ಬರು ಸಾವು, ಇನ್ನೊಬ್ಬರಿಗೆ ಸುಟ್ಟಗಾಯ
ಘಟನೆಯಲ್ಲಿ ಮೃತರನ್ನು ಮೂಲ್ಕಿ ಮೂಲದ ಮನೀಶ್ ಕರ್ಕೇರಾ (30) ಎಂದು ಗುರುತಿಸಲಾಗಿದೆ. ಮೊದಲು ಕಾಣೆಯಾಗಿದ್ದಾರೆ ಎಂದು ಭಾವಿಸಲಾಗಿದ್ದ ಮನೀಶ್ ಕರ್ಕೇರಾ ಮೃತದೇಹ ಬಳಿಕ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಅಲ್ಲಿ ಗುತ್ತಿಗೆಯಾಧಾರದಡಿ ಕೆಲಸ ನಿರ್ವಹಿಸುತ್ತಿದ್ದರು.
ಸ್ಫೋಟದಲ್ಲಿ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವರಿಗೆ 35 ಶೇ. ಸುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವರು ಅಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಕ್ಕದ ಕಚೇರಿಯಲ್ಲಿದ್ದ 8 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12.15ರ ಸುಮಾರಿಗೆ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕ (ಸಿಎಚ್‌ಟಿಯು) ಘಟಕದಲ್ಲಿ ಭಾರಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ.
ಸ್ಫೋಟದ ತೀವ್ರತೆಗೆ ಸಮೀಪದ ಜೋಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ, ಕಟ್ಟಡಗಳು ನಡುಗಿದ ಅನುಭವ ಆಗಿದೆ. ಮತ್ತೊಂದೆಡೆ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಫೋಟದ ಅನುಭವವಾಗಿದೆ. ಆದರೆ ವಿಮಾನ ನಿಲ್ದಾಣದ ಯಾವುದೇ ಮೂಲಸೌಲಭ್ಯಕ್ಕೆ ಹಾನಿಯಾಗಿಲ್ಲ ಹಾಗೂ ಆಡಳಿತ ಕಚೇರಿಯ ಗ್ಲಾಸ್‌ಗಳು ಅಲುಗಾಡಿಲ್ಲ ಎಂದು ವಿಮಾನ ನಿಲ್ದಾಣದ ಪಿಆರ್‌ಒ ಸ್ಪಷ್ಟಪಡಿಸಿದ್ದಾರೆ.
ನಡುಗಿದ ಮನೆ, ಶಾಲೆ, ಜನರ ಪ್ರತಿಭಟನೆ..
ಸ್ಫೋಟದ ತೀವ್ರತೆಗೆ ಎಂಆರ್‌ಪಿಎಲ್‌ನಿಂದ ಕೂಗಳತೆಯ ದೂರದಲ್ಲಿರುವ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳು ನಡುಗಿವೆ. ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಗಾಬರಿಗೊಂಡ ಗ್ರಾಮಸ್ಥರು ಬೀದಿಗಿಳಿದು ಎಂಆರ್‌ಪಿಎಲ್ ಪ್ರವೇಶ ದ್ವಾರದ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಫಯಾಜ್ ಮಾತನಾಡಿ "ಮಧ್ಯಾಹ್ನ ಸುಮಾರು 12.30ಕ್ಕೆ ಭೂಕಂಪವಾದಂತೆ ಭಾರಿ ಸ್ಫೋಟದ ಸದ್ದು ಕೇಳಿಸಿತು. ಜೋಕಟ್ಟೆಯ ಪಂಚಾಯತ್, ಗ್ರಂಥಾಲಯ, ಶಾಲೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಕಂಪನಿಯವರು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಿರಂತರ ಮಾಲಿನ್ಯ ಹಾಗೂ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ಊರಿನ ಜನರಿಗೆ ರಕ್ಷಣೆ ಇಲ್ಲವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಾಂತರಕ್ಕೆ ಆಗ್ರಹಿಸಿದ ಸ್ಥಳೀಯ ಮುಖಂಡರು:
ಸ್ಥಳೀಯ ಮುಖಂಡರಾದ ಮುನೀರ್ ಕಾಟಿಪಳ್ಳ, ಪರ್ವೇಜ್ ಅಲಿ ಸೇರಿದಂತೆ ನೂರಾರು ಪ್ರತಿಭಟನಾಕಾರರು ಸ್ಥಳಕ್ಕೆ ಧಾವಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಜೋಕಟ್ಟೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಿ ಸ್ಥಳಾಂತರ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ನ್ಯಾಯಕ್ಕೆ ಒತ್ತಾಯಿಸಿದರು.
ಎಂಆರ್‌ಪಿಎಲ್ ಹೇಳಿಕೆ..
ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡವನ್ನು ಮಧ್ಯಾಹ್ನ 2.47ರ ವೇಳೆಗೆ ಸಂಪೂರ್ಣವಾಗಿ ನಿಯಂತ್ರಿಸಿ ನಂದಿಸಲಾಗಿದೆ ಎಂದು ಎಂಆರ್‌ಪಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರುಡಾಲ್ಫ್ ನೊರೊನ್ಹಾ ತಿಳಿಸಿದ್ದಾರೆ.
ಅಗ್ನಿಶಾಮಕ ಕಾರ್ಯಾಚರಣೆ ಬಳಿಕ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಒಬ್ಬ ಮೃತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಅಲ್ಲದೆ, ಸುಟ್ಟ ಗಾಯಗಳಿಗೆ ಒಳಗಾದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಇದಕ್ಕೂ ಮುನ್ನ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಅಧಿಕ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಸಂಬಂಧಿತ ಘಟಕದ ಬ್ಯಾಟರಿ ಮಿತಿಗಳನ್ನು ಪ್ರತ್ಯೇಕಿಸಿ, ಎಂಆರ್‌ಪಿಎಲ್‌ನ ತುರ್ತು ಪ್ರತಿಕ್ರಿಯಾ ಹಾಗೂ ಅಗ್ನಿಶಾಮಕ ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ಕಾರ್ಯ ಮುಂದುವರಿದಿದ್ದು, ಪರಿಶೀಲಿತ ಮಾಹಿತಿಯನ್ನು ಲಭ್ಯವಾದಂತೆ ಹಂಚಿಕೊಳ್ಳಲಾಗುವುದು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.