ಕ್ರಿಶ್ಚಿಯನ್ ಕಾನ್ವೆಂಟ್‌ಗಳಲ್ಲೂ ದಸರಾ ರಜೆ ನೀಡಲು ಮುತಾಲಿಕ್ ಆಗ್ರಹ
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ದಸರಾ ರಜೆಯ ಅವ?ಯಲ್ಲಿ ಪರೀಕ್ಷೆ ಹಾಗೂ ತರಗತಿಗಳನ್ನು ನಡೆಸಿ, ಹಿಂದೂ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಾಂಸ್ಕೃತಿಕ ಹಬ್ಬದ ಆಚರಣೆಯಿಂದ ವಂಚಿಸುತ್ತಿರುವ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ವಿರುದ್ಧ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ. ಒಂದುವೇಳೆ ಈ ಬಾರಿಯೂ ದಸರಾ ರಜೆ ನೀಡದೆ ನಿಯಮ ಉಲ್ಲಂಘಿಸಿದರೆ ರಾಜ್ಯಾದ್ಯಂತ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ಸರ್ಕಾರವು ಅಧಿಕೃತವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 3ರಿಂದ 21ರವರೆಗೆ 20 ದಿನಗಳ ದಸರಾ ರಜೆಯನ್ನು ಘೋಷಿಸಿದೆ. ಆದರೆ, ಹೆಚ್ಚಿನ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಈ ಅವಧಿಯಲ್ಲಿ ಪರೀಕ್ಷೆಗಳನ್ನು ಇಟ್ಟು, ಶಾಲೆ ನಡೆಸಿ ಪಠ್ಯ ಬೋಧನೆ ಮಾಡುತ್ತಿವೆ. ದಸರಾ ರಜೆಯನ್ನು ಕಡಿತಗೊಳಿಸಿ, ಉಳಿದ ರಜೆಯನ್ನು ಕ್ರಿಸ್‌ಮಸ್ ಹಬ್ಬಕ್ಕೆ ನೀಡುತ್ತಿರುವುದು ಸಂಪೂರ್ಣ ಅನ್ಯಾಯ ಹಾಗೂ ಖಂಡನೀಯ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಸ್‌ಮಸ್‌ಗೆ 10 ದಿನಗಳ ರಜೆ ನೀಡುವ ಅಗತ್ಯವಿಲ್ಲ, ಡಿಸೆಂಬರ್ 25ರಂದು ಒಂದೇ ದಿನ ರಜೆ ನೀಡಿದರೆ ಸಾಕು. ಈ ಕುರಿತು ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ರಾಮ ಸೇನೆ, ಶ್ರೀರಾಮ ಸೇನೆ ಒಗ್ಗೂಡಿ ಕೆಲಸ..
ರಾಮ ಸೇನೆ ಮತ್ತು ಶ್ರೀರಾಮ ಸೇನೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ.ರಾಜ್ಯಾದ್ಯಂತ ಶ್ರೀರಾಮ ಸೇನೆಎಂಬ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತರು ಒಗ್ಗೂಡಿ ಸಂಘಟನೆಯನ್ನು ಬಲಪಡಿಸಲಿದ್ದಾರೆ.
ಸಂಘಟನೆಯ ಪ್ರಮುಖರಾದ ಕಿರಣ್ ವಿ.ಅಮೀನ್, ಸಂತೋಷ್ ಶೆಟ್ಟಿ ಒಡೂರು, ಪ್ರದೀಪ್ ಮೂಡುಶೆಡ್ಡೆ, ಲೋಕೇಶ್ ರಾವ್ ಬೆಳ್ತಂಗಡಿ, ನಾಗಾರ್ಜುನ ಗೌಡ, ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.