ಅಲ್ಪಸಂಖ್ಯಾತ ಸೇವಾಕೇಂದ್ರದಲ್ಲಿ ಹಾಸ್ಟೆಲ್ ಚಿಂತನೆ

ಅಲ್ಪಸಂಖ್ಯಾತ ಸೇವಾಕೇಂದ್ರದಲ್ಲಿ ಹಾಸ್ಟೆಲ್ ಚಿಂತನೆ


ಪುತ್ತೂರು: ನಗರದ ಸಿಟಿಒ ಗುಡ್ಡೆಯಲ್ಲಿ  ನಿರ್ಮಾಣವಾಗಿರುವ ಅಲ್ಪಸಂಖ್ಯಾತ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಅಶೋಕ್ ರೈ ಸೋಮವಾರ ಪರಿಶೀಲಿಸಿದರು.

ನಗರದಿಂದ ಒಂದಷ್ಟು ದೂರದಲ್ಲಿ  ಗುಡ್ಡದ ಮೇಲ್ಭಾಗದಲ್ಲಿರುವ  ಕಟ್ಟಡದಲ್ಲಿ ಸೇವಾ ಕೇಂದ್ರ ಆರಂಭಿಸಿದರೆ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ತೆರಳುವವರಿಗೆ ಕಷ್ಟವಾಗುತ್ತದೆ ಎಂಬ ಕಾರಣದಿಂದ ಈ ಕಟ್ಟಡವನ್ನು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ನಿಲಯವಾಗಿ ಪರಿವರ್ತಿಸಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಮನವಿ ನೀಡಿದ ಮೇರೆಗೆ ಶಾಸಕರು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಶಿಫಾರಸು ಪತ್ರ ಕಳಿಸಿದ್ದರು. ಅದರಂತೆ ಈ ಕಟ್ಟಡವನ್ನು  ಹಾಸ್ಟೆಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಗಳು ನಡೆಯುತ್ತಿರುವ ನಡುವೆ, ಕಟ್ಟಡವನ್ನು ಮೂಲ ಉದ್ದೇಶಕ್ಕೆ  ಮಾತ್ರ ಬಳಸಬೇಕೆಂದು ಎಸ್‌ಡಿಪಿಐ ಆಗ್ರಹಿಸಿದೆ. ಈ ನಡುವೆ, ಸೋಮವಾರ ಶಾಸಕರು ಕಟ್ಟಡವನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಅ ಕಾರಿ ವಿವರಣೆ:

ಸ್ಥಳದಲ್ಲಿದ್ದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಹಮ್ಮದ್ ಫಾರೂಕ್ ಮಾಹಿತಿ ನೀಡಿ, ಸೇವಾ ಕೇಂದ್ರ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸುವ ಶಿಫಾರಸು ಸರ್ಕಾರಕ್ಕೆ ಹೋಗಿದೆ. ಅಲ್ಪಸಂಖ್ಯಾತ ಸೇವಾ ಕೇಂದ್ರದಲ್ಲಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯವನ್ನು  ಈಗ ರಾಜ್ಯದಲ್ಲಿ ಹಜ್ ಭವನಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಹಾಸನದಲ್ಲಿಯೂ ಇಂಥದೇ ಸೇವಾ ಕೇಂದ್ರ ಕಟ್ಟಡ ನಿರ್ಮಿಸಲಾಗಿದ್ದು, ಇದೀಗ ಅದನ್ನು ಹಾಸ್ಟೆಲ್ ಆಗಿ ಪರಿವರ್ತಿಸಲಾಗಿದೆ. ಬೆಂಗಳೂರಿನಲ್ಲೂ ಹಜ್  ಭವನದಲ್ಲೇ ತರಬೇತಿ ಮತ್ತಿತರ ಚಟುವಟಿಕೆ ನಡೆಸಲಾಗುತ್ತಿದೆ. ಮಂಗಳೂರಿಗೂ ಹಜ್ ಭವನ ಮಂಜೂರಾಗಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನೀಡಲಾಗುವ ತರಬೇತಿಗಳು ಅಲ್ಲೇ ನಡೆಯಲಿವೆ ಎಂದರು.

ಪುತ್ತೂರಿನ ಸಾಮಾನ್ಯ ಸೇವಾ ಕೇಂದ್ರ ಕಟ್ಟಡವನ್ನೂ ಅಲ್ಪಸಂಖ್ಯಾತರ ಹಾಸ್ಟೆಲ್ ಆಗಿ ಬಳಸಬೇಕು ಎಂದು ಸ್ಥಳದಲ್ಲಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಶಾಸಕರನ್ನು ಒತ್ತಾಯಿಸಿದರು.  ಪುತ್ತೂರಿನಲ್ಲಿ ತಲೆ ಎತ್ತಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನೂತನ ಹಾಸ್ಟೆಲ್ ನಿರ್ಮಾಣವಾಗಲಿದೆ. ಒಂದು ವೇಳೆ ಅದಕ್ಕೆ ಮೊದಲೇ ಮೆಡಿಕಲ್ ಕಾಲೇಜು ಆರಂಭಗೊಂಡಲ್ಲಿ, ಒಂದು ವರ್ಷದ ಮಟ್ಟಿಗೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಆಗಿ ಈ ಕಟ್ಟಡವನ್ನು  ಇಲಾಖೆಯ ಅನುಮತಿ ಪಡೆದುಕೊಂಡು ಬಳಸುವ ಯೋಚನೆ ಇದೆ. ಅಂಥ ಸಂದರ್ಭ ಬಂದರೆ ಅಲ್ಪಸಂಖ್ಯಾತ ಸಮುದಾಯ ನಮ್ಮೊಂದಿಗೆ ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಪುತ್ತೂರು ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಜಾದ್, ಮುಖಂಡರಾದ ಶಕೂರ್ ಹಾಜಿ, ಯಾಕೂಬ್ ಮಲಾರ್, ಅರ್ಷದ್ ದರ್ಬೆ, ಫಾರೂಕ್ ಬಾಯಬ್ಬೆ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article