ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಮಗ್ರ ತನಿಖೆ, ಸೂಕ್ತ ಪರಿಹಾರಕ್ಕೆ ಆಗ್ರಹ

ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಮಗ್ರ ತನಿಖೆ, ಸೂಕ್ತ ಪರಿಹಾರಕ್ಕೆ ಆಗ್ರಹ

ಮಂಗಳೂರು: ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟ ಹಾಗೂ ಅಗ್ನಿಅವಘಡವು ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ಈ ಘಟನೆಯ ಕುರಿತು ಕೇಂದ್ರ ಸರ್ಕಾರ ತಕ್ಷಣವೇ ಸಮಗ್ರ ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಒತ್ತಾಯಿಸಿದ್ದಾರೆ.

ಸ್ಫೋಟದ ತೀವ್ರತೆಯಿಂದಾಗಿ ಶಬ್ದವು ಬಹುದೂರದವರೆಗೆ ಕೇಳಿಸಿದ್ದು, ಸುತ್ತಮುತ್ತಲ ಮನೆಗಳ ಕಿಟಕಿ ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣದ ಕುರಿತು ಉನ್ನತ ಮಟ್ಟದ ತನಿಖೆಗೆ ಅವರು ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಎಂಆರ್‌ಪಿಎಲ್ ಸುತ್ತಮುತ್ತಲಿನ ಸಾರ್ವಜನಿಕರು ಕಾರ್ಖಾನೆಯಿಂದ ಎದುರಾಗುತ್ತಿರುವ ಸುರಕ್ಷತೆಯ ಭೀತಿ ಹಾಗೂ ಮಾಲಿನ್ಯದ ಕುರಿತು ಧ್ವನಿ ಎತ್ತುತ್ತಿದ್ದರೂ, ಸಂಸ್ಥೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಎಂಆರ್‌ಪಿಎಲ್‌ನಲ್ಲಿನ ಸುರಕ್ಷತಾ ಮಾನದಂಡಗಳು, ತುರ್ತು ನಿರ್ವಹಣಾ ವ್ಯವಸ್ಥೆ ಹಾಗೂ ನಿಯಮಗಳ ಪಾಲನೆಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಯಬೇಕು. ತನಿಖೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಈ ಘಟಕದಿಂದ ಉಂಟಾಗುತ್ತಿರುವ ಶಬ್ದ, ವಾಯು ಹಾಗೂ ಜಲ ಮಾಲಿನ್ಯದ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಜನರ ಭೂಮಿ, ಪರಿಸರ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಈ ಕೈಗಾರಿಕೆಯು, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ವಿಷಯದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರವನ್ನು ತಕ್ಷಣವೇ ಪ್ರಶ್ನಿಸಿ ಸ್ಥಳೀಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article