ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ: ಮೃತಪಟ್ಟವರ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣ ವಸೂಲಿಗೆ ಸೂಚನೆ

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ: ಮೃತಪಟ್ಟವರ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣ ವಸೂಲಿಗೆ ಸೂಚನೆ


ಸುಳ್ಯ: ಸುಳ್ಯ ತಾಲೂಕಿನಲ್ಲಿ ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮೆಯಾಗಿ ವಸೂಲಿ ಮಾಡಲು ಬಾಕಿಯಾದ ಹಣವನ್ನು ಬ್ಯಾಂಕಿನವರ ಸಹಕಾರ ಪಡೆದುಕೊಂಡು ವಸೂಲಿ ಮಾಡುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸೂಚನೆ ನೀಡಿದ್ದಾರೆ.

ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ತಾಲೂಕಿನ ಗೃಹಲಕ್ಷ್ಮಿ ಫಲಾನುಭವಿಗಳು 232 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸುಮಾರು ಶೇ.50 ರಿಕವರಿ ಮಾಡಲಾಗಿದೆ. ಮೃತ ಫಲಾನುಭವಿಗಳ ಖಾತೆಗೆ ಜಮೆಯಾದ ಹಣವನ್ನು ಡ್ರಾ ಮಾಡಲಾಗಿದೆ ಎಂದು ಸಿಡಿಪಿಒ ಇಲಾಖೆ ಅಧಿಕಾರಿಗಳು ತಿಳಿಸಿದರು.

ಹಣ ಜಮೆಯಾದ ಎಲ್ಲಾ ಮೃತ ಫಲಾನುಭವಿಗಳ ಪಟ್ಟಿ ತಯಾರಿಸಿ ವರದಿ ನೀಡಬೇಕು. ಅಲ್ಲದೇ ಬ್ಯಾಂಕ್‌ನವರ ಮತ್ತು ಕುಟುಂಬದವರ ಸಹಕಾರ ಪಡೆದುಕೊಂಡು ಹಣವನ್ನು ಆದಷ್ಟು ಬೇಗ ವಸೂಲಿ ಮಾಡಬೇಕು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಮತ್ತು ಇಒ ರಾಜಣ್ಣ ಸೂಚನೆ ನೀಡಿದರು.

ಸಭೆಯಲ್ಲಿ ಅನ್ನಭಾಗ್ಯ ವಿಷಯ ಪ್ರಸ್ತಾಪಿಸಿದ ಆಹಾರ ನಿರೀಕ್ಷಕರು, ಪಡಿತರ ಮಾರಾಟ ಮಾಡುತ್ತಿದ್ದಾರೆಂದು ಕಳೆದ ಸಭೆಯಲ್ಲಿ ಪ್ರಸ್ತಾಪಗೊಂಡಿರುವ ಪ್ರಕಾರ, ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಮಾರಾಟ ಮಾಡದಂತೆ ಸೂಚನಾ ಫಲಕ ಅಳವಡಿಸಲಾಗಿದೆ. ಪಡಿತರ ಮಾರಾಟ ಕಂಡು ಬಂದರೆ ರೇಷನ್‌ಕಾರ್ಡ್ ರದ್ದು ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಡಿತರ ಇಕೆವೈಸಿ ತಾಲೂಕಿನಲ್ಲಿ 41630 ಮಂದಿ ಇಕೆವೈಸಿ ಮಾಡಬೇಕಾಗಿದ್ದು ಅದರಲ್ಲಿ 29258 ಮಂದಿ ಮಾಡಿಕೊಂಡಿದ್ದಾರೆ. ಒಟ್ಟು ಶೇ.75 ಪ್ರಗತಿ ಸಾಧಿಸಲಾಗಿದೆ. ಅ.20 ಇಕೆವೈಸಿಗೆ ಕೊನೆಯ ದಿನ ಎಂದು ಅವರು ಮಾಹಿತಿ ನೀಡಿದರು.

ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಇದರಿಂದ ವಿದ್ಯುತ್ ಸರಿಪಡಿಸುವಲ್ಲಿ ಸಮಸ್ಯೆಗಳಾಗುತ್ತಿದೆ ಎಂದು ಸದಸ್ಯರು ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸುಳ್ಯದಲ್ಲಿ ಶೇ. 60ರಷ್ಟು ಲೈನ್‌ಮ್ಯಾನ್‌ಗಳ ಕೊರತೆ ಇದೆ ಎಂದು ಸಭೆಗೆ ತಿಳಿಸಿದರು.

ಸರಕಾರದ ಯುವನಿಧಿ ಯೋಜನೆಯ ಮೂಲಕ ಸುಳ್ಯದಲ್ಲಿ ಅ.27 ರಂದು ಉದ್ಯೋಗ ಮೇಳ ಆಯೋಜನೆ ಮಾಡಲು ಸಭೆಯಲ್ಲಿ ತೀರ್ಮಾಣ ಮಾಡಲಾಯಿತು. ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಸುಮಾರು 10 ರಿಂದ 15 ಕಂಪೆನಿಗಳನ್ನು ಕರೆಸಿ ಉದ್ಯೋಗ ಮೇಳ ನಡೆಸಲು ಸೂಚನೆ ನೀಡಿದರು.

ಶಕ್ತಿ ಯೋಜನೆಯ ಮೂಲಕ ತೊಡಿಕಾನ, ಮಂಡೆಕೋಲು, ಮಡಪ್ಪಾಡಿಗೆ ಬಸ್ ಸಂಪರ್ಕ ವಿಸ್ತರಣೆ ಮಾಡಲಾಗಿದೆ. ಬಸ್‌ಗಳ ಕೊರತೆಯಿಂದ ಕೆಲವು ಕಡೆ ಸಮಸ್ಯೆ ಆಗುತ್ತಿದೆ ಅಧಿಕಾರಿ ಹೇಳಿದರು. ಪ್ರಯಾಣಿಕರ ಕೊರತೆ ಇರುವ ಕಡೆ ಸಮಯ ಬದಲಾವಣೆಗೆ ಅಧ್ಯಕ್ಷರು ಸೂಚನೆ ನೀಡಿದರು.

ಸದಸ್ಯರಾದ ವಿಜೇಶ್ ಹಿರಿಯಡ್ಕ, ಸೋಮಶೇಖರ ಕೇವಳ, ಭವಾನಿಶಂಕರ ಕಲ್ಮಡ್ಕ, ಈಶ್ವರ ಆಳ್ವ, ಅಬ್ಬಾಸ್ ಎ.ಬಿ., ಧನುಷ್ ಕುಕ್ಕೆಟ್ಟಿ, ಲತೀಫ್ ಅಡ್ಕಾರು, ಜ್ಞಾನಶೀಲನ್ ನೆಲ್ಲಿಕುಮೇರಿ, ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ಕಾಂತಿ ಸಂಪಾಜೆ, ಇದ್ದರು. ಸದಸ್ಯ ಕಾರ್ಯದರ್ಶಿ ಇ.ಒ. ರಾಜಣ್ಣ ಕಲಾಪ ನಡೆಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article