ವಿಶೇಷ ಸಚಿವ ಸಂಪುಟ ಸಭೆ-ಘೋಷಿತ ಯೋಜನೆ ಅನುಷ್ಠಾನ: ಸಚಿವ ಯು.ಟಿ. ಖಾದರ್

ವಿಶೇಷ ಸಚಿವ ಸಂಪುಟ ಸಭೆ-ಘೋಷಿತ ಯೋಜನೆ ಅನುಷ್ಠಾನ: ಸಚಿವ ಯು.ಟಿ. ಖಾದರ್


ಮಂಗಳೂರು: ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಯಾವೆಲ್ಲಾ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದೆಯೋ ಅವುಗಳನ್ನು ಅನುಷ್ಠಾನ ಮಾಡಲು ಸರಕಾರ ಬದ್ಧವಾಗಿದೆ. ಅನುದಾನದ ಕೊರತೆ ಆಗದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸೋಮವಾರ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಇಲಾಖೆಯು ಪ್ರತೀ ಮೂರು ಅಥವಾ ಆರು ತಿಂಗಳಿಗೊಮ್ಮೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಅದರ ಆಡಳಿತಾತ್ಮಕ ಪ್ರಕ್ರಿಯೆ. ಇದೇ ವೇಳೆ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನ ಮುಖ್ಯಮಂತ್ರಿ ಹಾಗೂ ಸರಕಾರದ ಜವಾಬ್ಧಾರಿಯಾಗಿರುತ್ತದೆ. ಅದನ್ನು ಹೇಗೆ, ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಸರಕಾರ ನಿರ್ಧರಿಸಲಿದೆ ಎಂದು ಸಚಿವರು ಹೇಳಿದರು. 

ಬಿಜೆಪಿಯವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ, ಏನು ಮಾಡಲಿದ್ದಾರೆ? ಕನಿಷ್ಠ ಸಚಿವ ಸಂಪುಟ ಸಭೆಯನ್ನು ಕರಾವಳಿಯಲ್ಲಿ ಮಾಡಿದ್ದಾರೆಯೇ, ಯಾವುದಾದರೂ ನೀತಿ ಜಾರಿಗೊಳಿಸಿದ್ದಾರೆಯೇ? ಅದನ್ನು ಹೇಳಲಿ. ನಾವು ಘೋಷಣೆ ಮಾಡಿದ್ದನ್ನು ಈಡೇರಿಸುತ್ತೇವೆ ಎಂದರು. 

ತುಳು ಭಾಷೆಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿ ಡಾ.ಎಂ.ಮೋಹನ್ ಆಳ್ವ ತಂಡ ನೀಡಿದ ವರದಿ ಬಿಜೆಪಿ ಅವಧಿಯಲ್ಲಿ ಅವರ ಕೈಯಲ್ಲಿತ್ತು. ಇಲ್ಲಿನ ಸುನೀಲ್ ಕುಮಾರ್ ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ವರದಿ ಕೈಯಲಿದ್ದು, ಸಹಿ ಹಾಕಲು ಮಾತ್ರ ಬಾಕಿ ಇದ್ದಿದ್ದು. ಅದಕ್ಕೂ ಧೈರ್ಯ ಬೇಕು. ಆ ಧೈರ್ಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಈ ರೀತಿ ಸುಮ್ಮನೆ ಮಾತುಗಳಲ್ಲಿ ಆರೋಪ ಮಾಡುತ್ತಾ ಹೋದರೆ ಜಿಲ್ಲೆಯ ಜನ ಇವರನ್ನು ಕ್ಷಮಿಸುವುದಿಲ್ಲ. ಜಿಲ್ಲೆಯ ಜನರು ಶ್ರಮಜೀವಿಗಳು, ಹೆಂಚು, ಗೇರು, ಧಕ್ಕೆಯಲ್ಲಿ ಶ್ರಮ ವಹಿಸಿ ದುಡಿದು ಮೇಲೆ ಬಂದವರು. ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜನತೆ ಅದನ್ನು ತೋರಿಸಿಕೊಡಲಿದ್ದಾರೆ. ಸುಮ್ಮನೆ ರಾಜಕೀಯ ಮಾಡುವ ಬದಲು ಏನು ಮಾಡಿದ್ದಾರೆ ಏನು ಮಾಡುತ್ತಾರೆ ಹೇಳಲಿ ಎಂದು ಬಿಜೆಪಿ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿಯವರಿಗೆ ಯಾವುದೂ ಯೋಜನೆ ಅನುಷ್ಠಾನ ಆಗುವುದು ಬೇಡ. ಘೋಷಣೆಯಾಗಿ ಕನಿಷ್ಠ ಆರರಿಂದ ಒಂದು ವರ್ಷವಾದರೂ ಯೋಜನೆ ಜಾರಿಯಾಗದಿದ್ದರೆ ಈ ರೀತಿಯ ರಾಜಕೀಯವನ್ನು ಒಪ್ಪಬಹುದು. ಆದರೆ ಸಚಿವ ಸಂಪುಟ ಆಗುವ ಮೊದಲೇ ವೇದವ್ಯಾಸ ಕಾಮತ್ ಚೊಂಬು ಖರೀದಿಸಿ ಮನೆಯಲ್ಲಿ ಇರಿಸಿದ್ದರೆ ಏನು ಮಾಡುವುದು ಎಂದು ಖಾದರ್ ವ್ಯಂಗ್ಯವಾಡಿದರು. 

ಪಿಪಿಪಿ ಹೆಸರಿನಲ್ಲಿ ಯೋಜನೆಗಳ ಅನುಷ್ಠಾನವಾದರೂ ನಿಯಂತ್ರಣ ಸರಕಾರದ ಬಳಿ ಇರಲಿದೆ. ಯಾವುದೇ ಬೃಹತ್ ಯೋಜನೆಗಳನ್ನು ಜಾರಿಗೆ ತಂದಾಗ ನಿರ್ವಹಣೆಗೆ ಸರಕಾರ ಖಾಸಗಿಯವರನ್ನು ನೇಮಕ ಮಾಡುತ್ತದೆ ಅಷ್ಟೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article