ಎನ್‌ಎಂಪಿಎ ಪ್ರದೇಶಾಭಿವೃದ್ಧಿಗೆ ಹೆಬ್ಬಾಗಿಲು: ಜಿಲ್ಲಾಧಿಕಾರಿ ಎಚ್.ವಿ.ದರ್ಶನ್

ಎನ್‌ಎಂಪಿಎ ಪ್ರದೇಶಾಭಿವೃದ್ಧಿಗೆ ಹೆಬ್ಬಾಗಿಲು: ಜಿಲ್ಲಾಧಿಕಾರಿ ಎಚ್.ವಿ.ದರ್ಶನ್


ಮಂಗಳೂರು: ನವಮಂಗಳೂರು ಬಂದರು ಪ್ರದೇಶಾಭಿವೃದ್ಧಿಗೆ ಹೆಬ್ಬಾಗಿಲಾಗಿದೆ. ಅದು ಒದಗಿಸುವ ನಾನಾ ಅವಕಾಶಗಳನ್ನು ಸ್ಥಳೀಯ ಉದ್ದಿಮೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ದ.ಕ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ಕರೆ ನೀಡಿದರು.

ಭಾರತೀಯ ಉದ್ದಿಮೆಗಳ ಒಕ್ಕೂಟ ಸಿಐಐ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂದರು ಮತ್ತು ಲಾಜಿಸ್ಟಿಕ್ಸ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ತಯಾರಿಸಲಾಗುವ ಎಲ್ಲಾ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗೆ ತಲಪಿಸಬೇಕು. ಅದಕ್ಕೆ ಪೂರಕವಾದ ಮೂಲಭೂತ ಸೌಲಭ್ಯಗಳು ನವ ಮಂಗಳೂರು ಬಂದರಿನಲ್ಲಿ ಗರಿಷ್ಠಮಟ್ಟ ದಲ್ಲಿದೆ. ಹಾಗಾಗಿ ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳೂ ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. 

ನವಮಂಗಳೂರು ಬಂದರನ್ನು ಬಳಸಿಕೊಂಡರೆ ಕರಾವಳಿಯ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಈಗಾಗಲೇ ಕರಾವಳಿಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನೂ ರೂಪಿಸಲಾಗಿದೆ. ಜಿಲ್ಲೆಯ ಶಾಂಭವಿ, ನಂದಿನಿ, ಫಲ್ಗುಣಿ, ನೇತ್ರಾವತಿ ನದಿಗಳನ್ನು ಜಲಮುಖಿ ಸಾಗಾಟಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. 

ಸಿಐಐ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಗುರುಪ್ರಸಾದ್ ಮುದ್ಲಾಪುರ್ ಮಾತನಾಡಿ, ಮಂಗಳೂರು ರಾಜ್ಯದ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿದೆ. ನಾನಾ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಹಾಗಾಗಿ ಮಂಗಳೂರನ್ನು ಮುಂದೆ ಲಾಜಿಸ್ಟಿಕ್ಸ್ ಕೇಂದ್ರವಾಗಿಯೂ ಅಭಿವೃದ್ಧಿ ಪಡಿಸುವುದಕ್ಕೆ ಅವಕಾಶಗಳಿವೆ. ಇದರಿಂದ ರಾಜ್ಯದ ಎಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಿಗೆ ನೆರವಾಗಲಿದೆ ಎಂದರು. 

ಕರ್ನಾಟಕ ಮೆರಿಟೈಂ ಮಂಡಳಿಯ ಸಿಇಒ ಬಾಲಚಂದ್ರ ಎಚ್.ಸಿ ಮಾತನಾಡಿ, ಮಂಡಳಿಯ ಮೂಲಕ 8295 ಕೋ.ರೂ. ಮೊತ್ತದ ವಿವಿಧ ಯೋಜನೆಗಳನ್ನು ಸರಕಾರ ಕರಾವಳಿ ಕ್ಯಾಬಿನೆಟ್ ಸಭೆಯಲ್ಲಿ ಘೋಷಿಸಿದೆ. ಇಂತಹ ಸಮಾವೇಶಗಳ ಮೂಲಕ ಸುಧಾರಣೆ ಸಾಧ್ಯವಾಗಲಿದೆ ಎಂದರು. 

ಮೂಲಸೌಕರ್ಯ ಮತ್ತು ನಗರ ಸಂಚಾರ ಸಮಿತಿಯ ಸಂಚಾಲಕ ಪವನ್ ಕುಮಾರ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಐ ಮಂಗಳೂರು ಅಧ್ಯಕ್ಷ ಅಭಿನವ್ ಬನ್ಸಲ್, ಸಿಐಐ ರಾಜ್ಯ ಉಪಾಧ್ಯಕ್ಷ ಸ್ಯಾಮ್ ಚೆರಿಯನ್, ಸಿಐಐ ಮಂಗಳೂರು ಉಪಾಧ್ಯಕ್ಷ ಅನಂತೇಶ್ ವಿ.ಪ್ರಭು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article