ಎಂಆರ್‌ಪಿಎಲ್ ದುರ್ಘಟನೆ: ಬಿಎಂಎಸ್ ಪ್ರತಿಭಟನೆಗೆ ಸಂಸ್ಥೆಯ ಆಡಳಿತದ ಸ್ಪಂದನೆ-ಮೃತನ ಕುಟುಂಬಕ್ಕೆ 1.20 ಕೋಟಿ ಪರಿಹಾರ, ಒಬ್ಬರಿಗೆ ಉದ್ಯೋಗದ ಭರವಸೆ

ಎಂಆರ್‌ಪಿಎಲ್ ದುರ್ಘಟನೆ: ಬಿಎಂಎಸ್ ಪ್ರತಿಭಟನೆಗೆ ಸಂಸ್ಥೆಯ ಆಡಳಿತದ ಸ್ಪಂದನೆ-ಮೃತನ ಕುಟುಂಬಕ್ಕೆ 1.20 ಕೋಟಿ ಪರಿಹಾರ, ಒಬ್ಬರಿಗೆ ಉದ್ಯೋಗದ ಭರವಸೆ


ಬಂಟ್ವಾಳ: ಎಂಆರ್‌ಪಿಎಲ್‌ನ ಸಿಎಚ್‌ಟಿ ಘಟಕದಲ್ಲಿ ಬುಧವಾರ ಸಂಭವಿಸಿದ ದುರ್ಘಟನೆಯಲ್ಲಿ ಗುತ್ತಿಗೆ ಕಾರ್ಮಿಕರಾದ ಮನೀಶ್ ಕರ್ಕಡ ಅವರು ಮೃತಪಟ್ಟು, ಹಲವು ಕಾರ್ಮಿಕರು ಗಾಯಗೊಂಡ ಹಿನ್ನೆಲೆಯಲ್ಲಿ ಬೆಎಂಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಎಂಆರ್‌ಪಿಎಲ್ ಗೇಟ್ ಬಳಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಅವರು ಈ ಸಂದರ್ಭ ಮಾತನಾಡಿ, ಮೃತ ಕಾರ್ಮಿಕರ ಕುಟುಂಬಕ್ಕೆ ನ್ಯಾಯ, ಗಾಯಗೊಂಡ ಕಾರ್ಮಿಕರಿಗೆ ಸಂಪೂರ್ಣ ಚಿಕಿತ್ಸೆ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸುವಂತೆ ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು:

ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು, ಮೃತ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಅದೇರೀತಿ ದುರ್ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯೇ ಭರಿಸಬೇಕು ಹಾಗೂ ಮುಂದಿನ ಚಿಕಿತ್ಸೆಯ ಜವಾಬ್ದಾರಿಯನ್ನೂ ವಹಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳ ಮುಂದೆ ಮನವಿ ಮೂಲಕ ಒತ್ತಾಯಿಸಲಾಯಿತು.

ಹಾಗೆಯೇ ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸಬೇಕು. ಕಾರ್ಮಿಕರ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಘಟನೆಯ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಸಂದರ್ಭ  ಆಗ್ರಹಿಸಲಾಯಿತು.

ಬೇಡಿಕೆಗೆ ಸಂಸ್ಥೆಯ ಸ್ಪಂದನೆ:

ಬಿಎಂಎಸ್ ವತಿಯಿಂದ ಬೇಡಿಕೆಗಳನ್ನು ಮಂಡಿಸಿದ ಹಿನ್ನೆಲೆಯಲ್ಲಿ ಎಂಆರ್ ಪಿಎಲ್ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ ಬೆಎಂಎಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮೃತ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂ. ಪರಿಹಾರ ನೀಡುವುದಾಗಿ ಎಂಸ್ಥೆಯ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ ಎಂದು ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.

ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವ ಕುರಿತು ಸಂಸ್ಥೆಯಿಂದ ಭರವಸೆ ದೊರೆತಿದ್ದು, ಗಾಯಗೊಂಡಿರುವ ಕಾರ್ಮಿಕರಿಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದು ಹಾಗೂ ಅಗತ್ಯವಿರುವ ಮುಂದಿನ ಚಿಕಿತ್ಸೆಗೆ ಸಹಕಾರ ನೀಡುವ ಕುರಿತು ಸಂಸ್ಥೆಯ ವತಿಯಿಂದ ಭರವಸೆ ದೊರೆತಿದೆ ಎಂದು ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯವಿಮೆ ಸಹಿತ ಕೆಲ ಬೇಡಿಕೆಯನ್ನು ಜಾರಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಈ ಕುರಿತು ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ನಾಲ್ಕು ವಾರಗಳ ಅವಧಿಯಲ್ಲಿ ಅಂತಿಮಗೊಳಿಸುವುದಾಗಿ ಸಂಸ್ಥೆ ಲಿಖಿತವಾಗಿ ತಿಳಿಸಿದೆ ಎಂದು ಅವರು ತಿಳಿಸಿದ್ದು, ಭರವಸೆಗಳು ನಿಗದಿತ ಅವಧಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಬಿಎಂಎಸ್ ಜಿಲ್ಲಾ ಘಟಕ ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಬಿಎಂಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಎಂಆರ್‌ಪಿಎಲ್ ಮಜ್ದೂರ್ ಸಂಘದ ಪ್ರಮುಖರಾದ ರೂಪೇಶ್ ರೈ, ಬಾಳಪ್ಪ, ದಯಾನಂದ, ದುರ್ಗಾಪ್ರಸಾದ್, ಜಯಕುಮಾರ್ ಶೆಟ್ಟಿ ಹಾಗೂ ಮಂಜುನಾಥ್, ಸ್ಥಳೀಯ ಕಾರ್ಮಿಕ ಮುಖಂಡರಾದ ಪ್ರಶಾಂತ್ ಮುಡೈಕೋಡಿ, ಸತ್ಯಜಿತ್, ವರುಣ್ ಚೌಟ, ಭರತ್ ರಾಜ್, ಸರಿತಾ ಶೆಟ್ಟಿ, ಲೋಕೇಶ್ ಬೊಲ್ಲಜ್ಜೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article