ರೈಲ್ವೇ ವ್ಯವಸ್ಥಾಪಕರ ನೇತೃತ್ವದ ತಂಡ ಪ್ರಮುಖ ರೈಲು: ಕೇಂದ್ರಗಳಿಗೆ ಭೇಟಿ ರೈಲು ಕಾರ್ಯಾಚರಣೆಗಳ ಸಿದ್ಧತೆ ಪರಿಶೀಲನೆ
ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಜೋಕಟ್ಟೆ ಸೇರಿದಂತೆ ಪ್ರಮುಖ ರೈಲು ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಕಾರ್ಯಾಚರಣಾ ವ್ಯವಸ್ಥೆ, ಸುರಕ್ಷತಾ ಕ್ರಮಗಳು, ನಿರ್ವಹಣಾ ಚಟುವಟಿಕೆಗಳು ಹಾಗೂ ಪ್ರಯಾಣಿಕರ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.
ರೈಲ್ವೆ ಸಿಬ್ಬಂದಿಗಳೊಂದಿಗೂ ಚರ್ಚೆ ನಡೆಸಿದ ಅಧಿಕಾರಿಗಳು ಹೊಸ ವಿಭಾಗೀಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಿಬ್ಬಂದಿ, ಸಂಪನ್ಮೂಲ ಹಾಗೂ ಮೂಲಸೌಕರ್ಯಗಳ ಬಗ್ಗೆಯೂ ಮಾಹಿತಿ ಪಡೆದರು.
ವಿವಿಧ ವಿಭಾಗಗಳ ನಡುವೆ ಪರಿಣಾಮಕಾರಿ ಸಮನ್ವಯ, ಸಿಬ್ಬಂದಿಯ ಸಿದ್ಧತೆ, ರೈಲುಗಳ ಸುಗಮ ಸಂಚಾರ, ಸುರಕ್ಷತೆ ಹಾಗೂ ನಿರ್ವಹಣಾ ಕಾರ್ಯಗಳಿಗೆ ಆದ್ಯತೆ ನೀಡಲಾಯಿತು. ಕಾರ್ಯಾಚರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಹಾಗೂ ಕ್ಷೇತ್ರ ಮಟ್ಟದ ಘಟಕಗಳು ಮತ್ತು ವಿಭಾಗೀಯ ಕಚೇರಿಯ ನಡುವೆ ನಿರಂತರ ಸಮನ್ವಯ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಂಗಳೂರು ರೈಲು ಪ್ರದೇಶವು ಮೈಸೂರು ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ, ನಿರ್ವಹಣೆ, ಸುರಕ್ಷತಾ ವ್ಯವಸ್ಥೆ ಹಾಗೂ ಪ್ರಯಾಣಿಕ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.