ಮುಖ್ಯಾಧಿಕಾರಿ ವಿರುದ್ಧ ಶಾಸಕದ್ವಯರು ಕೆಂಡಾಮಂಡಲ
ಮಂಗಳೂರು ಸಹಾಯಕ ಕಮಿಷನರ್ ಆದ ಪುರಸಭೆಯ ಆಡಳಿತಾಧಿಕಾರಿ ಮೀನಾಕ್ಷಿ ಆರ್ಯ ಅವರ ಉಪಸ್ಥಿತಿಯಲ್ಲಿ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಹಾಗೂ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುಧೀರ್ಘವಾಗಿ ನಡೆದ ಈ ವಿಶೇಷ ಸಭೆಯಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಚರ್ಚೆ ಆರಂಭಿಸಿದಾಗ ಕೆಯುಡಬ್ಲು ಎಸ್ ಇಂಜಿನಿಯರ್ ಯಾಕೆ ಬರಲಿಲ್ಲ? ಎಂದು ಮುಖ್ಯಾಧಿಕಾರಿ ಅವರಲ್ಲಿ ಶಾಸಕರು ಪ್ರಶ್ನಿಸಿದರು. "ಅವರನ್ನು ಕರೆದಿಲ್ಲ" ಎಂದು ಮುಖ್ಯಾಧಿಕಾರಿ ಉತ್ತರಿಸಿದಾಗ `ನೀರಿನ ಸಮಸ್ಯೆ ಪರಿಹಾರ ಆಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿ ಇಲ್ಲವಾದರೆ ಚರ್ಚಿಸಿ ಏನು ಪ್ರಯೋಜನ, ಸಂಬಂಧಿಸಿದ ಅಧಿಕಾರಿಯೇ ಇಲ್ಲವಾದರೆ ಪರಿಹಾರ ಹೇಗೆ ಸಾಧ್ಯ ಎಂದು ಶಾಸಕರಾದ ರಾಜೇಶ್ ನಾ?ಕ್ ಹಾಗೂ ಮಂಜುನಾಥ ಭಂಡಾರಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಸಭೆಹಾಜರಾಗುವಂತೆ ಬರಲು ಕರೆ ಮಾಡಿ ಎಂದು ಸೂಚಿಸಲಾಯಿತು.ಅವರಿಗೆ ಮಾಹಿತಿ ನೀಡಿ ಬಾರದಿದ್ದಲ್ಲಿ ಅವರನ್ನು ಸಸ್ಪಂಡ್ ಮಾಡುವಂತ ಅಧಿಕಾರವನ್ನು ಬಳಸಬೇಕಾದೀತು ಎಂದು ಮಂಜುನಾಥ್ ಭಂಡಾರಿ ಎಚ್ಚರಿಸಿದರು.
1 ತಾಸಿನ ಬಳಿಕ ಕೆಯುಡಬ್ಲುಎಸ್ ಇಂಜಿನಿಯರ್ ಶೋಭಾಲಕ್ಷ್ಮೀ ಅವರು ಸಭೆಗೆ ಹಾಜರಾದರು. ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಪಾಣೆಮಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅವರು ಸಭೆಯಲ್ಲಿ ಮಂಡಿಸಿದರು.
ಈ ವೇಳೆ ಮಾತಿನ ಚಕಮಕಿಯು ನಡೆಯಿತು.
ಬಂಟ್ವಾಳ ಪುರಸಭೆಗೆ ಕುಡಿಯುವ ನೀರು ಸಾಕಷ್ಟಿದೆ. ನೀರಿನ ಸಂಗ್ರಹಕ್ಕಾಗಿ ಜಕ್ರಿಬೆಟ್ಟಿನಲ್ಲಿ ಡ್ಯಾಂ ನಿರ್ಮಿಸಲಾಗಿದೆ. ಪೈಪ್ ಲೈನ್ ವ್ಯವಸ್ಥೆ ಕೂಡ ಬಹುತೇಕ ಆಗಿದೆ. ಇಷ್ಟಾದರೂ ನೀರು ಬಿಡುವಲ್ಲಿ ಆಗುವ ಸಮಸ್ಯೆಯ ಬಗ್ಗೆ ದಿನನಿತ್ಯ ತನಗೆ ಸಾರ್ವಜನಿಕರಿಂದ ಕರೆಗಳು ಬರುತ್ತಿವೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಆಡಳಿತಾಧಿಕಾರಿಯವರ ಗಮನಕ್ಕೆ ತಂದರು.
ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆಗಳಿದ್ದರೂ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಕಾರ್ಮಿಕರ ಕೊರತೆ ಎದುರಾಗಿದೆ. ಈ ಹಿಂದೆ ಕೆಲಸದಲ್ಲಿದ್ದ ಕಾರ್ಮಿಕರನ್ನು ಕಿತ್ತುಹಾಕಲಾಗಿದ್ದು,ಈ ಮುಖ್ಯಾಧಿಕಾರಿಯವರು ಬಂದ ಬಳಿಕ ಪುರಸಭೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಉದ್ಭವಿಸಿವೆ ಎಂದು ನಿಕಟಪೂರ್ವ ಸದಸ್ಯ ಗೋವಿಂದಪ್ರಭು ಅವರು ದೂರಿದರು.
30 ಕಡೆ ಸೋರಿಕೆ:
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೂ ದುರಸ್ತಿ ಕಾರ್ಯ ನಡೆಯುತ್ತಿಲ್ಲ, ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಪೌರ ಕಾರ್ಮಿಕರಿಂದಲೇ ಮಾಡಿಸ ಲಾಗುವುದರಿಂದ ಇತರ ಕೆಲಸಗಳು ಕೂಡ ಅಗುತ್ತಿಲ್ಲ ಎಂದು ಅವರು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ ಪೌರ ಕಾರ್ಮಿಕರನ್ನು ಪೈಪ್‌ಲೈನ್ ದುರಸ್ತಿ ಕಾರ್ಯಕ್ಕೆ ಬಳಸಬಾರದು. ನೀರು ಸರಬರಾಜು ಮತ್ತು ಪೈಪ್‌ಲೈನ್ ನಿರ್ವಹಣೆಗೆ ಅಗತ್ಯವಿರುವ ಕಾರ್ಮಿಕರನ್ನು ಕೂಡಲೇ ನೇಮಕ ಮಾಡಬೇಕು ಎಂದು ಸೂಚಿಸಿದರು. ಅಗತ್ಯವಿದ್ದಲ್ಲಿ ಟೆಂಡರ್ ಕರೆದು ಸಿಬ್ಬಂದಿ ನೇಮಕ ಮಾಡಿ, ಸಂಬಂಧಿಸಿದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರಿಗೆ ನಿರ್ದೇಶಿಸಿದರು.
ಒಣ ತ್ಯಾಜ್ಯ ಎಂಆರ್ ಎಫ್ ಸಹಾಯ ಪಡೆಯಿರಿ: ಭಂಡಾರಿ ಸಲಹೆ
ಒಣತ್ಯಾಜ್ಯವನ್ನು ಎಂಆರ್‌ಎಫ್ ಘಟಕದೊಂದಿಗೆ ಸಮನ್ವಯಗೊಳಿಸುವ ಮೂಲಕ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸಲು ಅವಕಾಶ ಇದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಲಹೆ ನೀಡಿದರು.
ಆಗ ನಿಕಟ ಸದಸ್ಯ ಗೋವಿಂದ ಪ್ರಭು ಮಾತನಾಡಿ ಕಂಚಿನಡ್ಕ ಪದವಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿರುವ ಯಂತ್ರೋಪಕರಣಗಳು ಸಮರ್ಪಕವಾಗಿ ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಅಲ್ಲಿದ್ದ ನೌಕರರಿಗೆ ವೇತನ ನೀಡದಿದ್ದರಿಂದ ಅವರು ಅಲ್ಲಿಂದ ಬಿಟ್ಟು ಹೋಗಿದ್ದಾರೆ. ಮನೆ, ಮನೆ ಕಸ ಸಂಗ್ರಹಿಸುವ ವಾಹನಗಳು ಪ್ರತಿದಿನ ಸಂಚರಿಸುತ್ತಿದ್ದವು. ಇದೀಗ ವಾರಕ್ಕೊಮ್ಮೆ ಮಾತ್ರ ಬರುತ್ತಿವೆ ಎಂದರು.
ಮಂಜುನಾಥ ಭಂಡಾರಿ ಮಾತನಾಡಿ ತ್ಯಾಜ್ಯ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ವಾಹನಗಳ ನಿಯೋಜನೆಗೆ ಎಲ್ಲಾ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. 15 ದಿನದೊಳಗಾಗಿ ಎಲ್ಲಾ ವಾಹನ ಬಳಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಭರವಸೆ ನೀಡಿದರು.
ಇದೇ ವೇಳೆ ಪುರಸಭೆಯಲ್ಲಿರುವ 16 ಘನತ್ಯಾಜ್ಯ ವಾಹನಗಳಲ್ಲಿ ಎಷ್ಟು ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಮಂಜುನಾಥ ಭಂಡಾರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಆಗ ಸಾಮಾಜಿಕ ಕಾರ್ಯಕರ್ತ ಸಮದ್ ಅವರು ಮಾತನಾಡಿ, ಮುಖ್ಯಾಧಿಕಾರಿಯವರು ಎಲ್ಲಾ ವಿಚಾರದಲ್ಲು ತಪ್ಪ ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
ಸಮಸ್ಯೆ ಪರಿಹಾರ ಮುಖ್ಯ!
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರು ಹಾಗೂ ತ್ಯಾಜ್ಯದ ಸಮಸ್ಯೆ ವಿವಿಧ ರೀತಿಯಲ್ಲಿ ಬಿಗಡಾಯಿಸುತ್ತಿರುವ ಕುರಿತಮನತೆ ಪುರಸಭೆಯ ನಿಕಟಪೂರ್ವ ಸದಸ್ಯರಾದ ಹರಿಪ್ರಸಾದ್,ಶಶಿಕಲಾ,ಮೀನಾಕ್ಷಿಗೌಡ ಸಹಿತ ಸಾರ್ವಜನಿಕರು ಸಭೆಯಲ್ಲಿ ತಿಳಿಸಿದಾಗ ಶಾಸಕ ರಾಜೇಶ್ ನಾಯ್ಕ್ ಅವರು ಕೂಡ ಧ್ವನಿಗೂಡಿಸಿದರು. ಆಗ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಅವರು ಎಲ್ಲಾ ಆಕ್ಷೇಪ ಹಾಗೂ ದೂರಿನ ಬಗ್ಗೆ ಉತ್ತರಿಸಿ ನಿಯಮಬಾಹಿರದಿಂದಾಗಿ ಲಕ್ಷಾಂತರ ರೂ. ವೆಚ್ಚವನ್ನು ತಡೆದು ಟೆಂಡರ್ ಆಧಾರದಲ್ಲಿಯೇ ಎಲ್ಲಾ ಕೆಲಸ ನಡೆಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ಶಾಸಕ ರಾಜೇಶ್ ನಾಯ್ಕ್ ಪ್ರತಿಕ್ರಿಯಿಸಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿ, ಅವರ ನೋವಿಗೆ ಬೆಲೆ ಕೊಡದಿರುವುದು ಉತ್ತಮ ಆಡಳಿತವಲ್ಲ. ನಿಯಮಾವಳಿಗಳನ್ನು ಪಾಲಿಸಿಕೊಂಡು ಜನರಿಗೆ ಮಾನವೀಯ ನೆಲೆಯಲ್ಲಿಯೂ ಸ್ಪಂದಿಸುವ ಕೆಲಸ ಮಾಡಬೇಕು. ಸಮಸ್ಯೆ ಸೃಷ್ಟಿಸುವುದಲ್ಲ; ಸಮಸ್ಯೆ ಪರಿಹರಿಸುವುದು ಮುಖ್ಯ. ಇಲಾಖೆಗಳು, ಅಧಿಕಾರಿಗಳು ಸಮನ್ವಯದಿಂದ ಸ್ಪಂದಿಸಿದರೆ ಜನಸಾಮಾನ್ಯರಿಗೆ ಉತ್ತಮ ಸೇವೆ ದೊರೆಯಲು ಸಾಧ್ಯ ಎಂದರು.
ಯಾವುದೇ ವಿಚಾರಕ್ಕೆ ಸಂಬಂಧಿಸಿ ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆದು ನಿರ್ಣಯ ಕೈಗೊಂಡು ಆಡಳಿತಾತ್ಮಕ ಮಂಜೂರಾತಿ ಪಡೆಯಬೇಕು,ಆದರೆ ಮುಖ್ಯಾಧಿಕಾರಿಯವರು ಸಭೆ ನಡೆಸಲು ಇಲ್ಲ, ನಿರ್ಣಯವು ಇಲ್ಲ, ಹಾಗೆಯೇ 10 ತಿಂಗಳ ನೀರಿನ,ತೆರಿಗೆಯ ಸಂಗ್ರಹದಲ್ಲು ಲಕ್ಷಾಂತರ ರೂ.ಪುರಸಭೆಗೆ ನಷ್ಟವಾಗುತ್ತಿದೆ. ನೀರಿನ ಬಿಲ್ಲು ಕೊಡುವವರೇ ಇಲ್ಲದಿದ್ದು,ಸ್ವಯಂಪ್ರೇರಿತವಾಗಿ ಶುಲ್ಕ ಪಾವತಿಗೆ ಸಂಬಂಧಿಸಿ ರಿಜಿಸ್ಟ್ರರ್ ಪುಸ್ತಕವೇ ಇಲ್ಲ ಎಂದು ಗೋವಿಂದಪ್ರಭು ಆರೋಪಿಸಿದರು.
15 ದಿನದಲ್ಲಿ ಮತ್ತೆ ಪರಿಶೀಲನೆ:
ನೀರು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆ ಗಂಭೀರ ಹಂತ ತಲುಪಿದ್ದು, ಸಮಸ್ಯೆಗಳನ್ನು ಹಂತ, ಹಂತವಾಗಿ ಪರಿಹರಿಸಲಾಗುವುದು. 15 ದಿನಗಳ ಬಳಿಕ ಆಡಳಿತಾಧಿಕಾರಿಯವರ ಉಪಸ್ಥಿತಿಯಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕೈಗೊಂಡ ಕ್ರಮಗಳ ಪರಿಶೀಲಿಸಲಾಗುವುದು. ಯುಜಿಡಿ ಕಾಮಗಾರಿಗೆ ಅಗತ್ಯ ಅನುದಾನ ಮೀಸಲಿಡಲಾಗಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಆಡಳಿತಾಧಿಕಾರಿಯವರು ಕೂಡ ವರ್ಗಾವಣೆಯಾದರೂ ಇಲ್ಲಿನ ಸಮಸ್ಯೆಗೆ ಮುಕ್ತಿ ನೀಡಿಯೇ ತೆರಳುವ ವಿಶ್ವಾಸವಿದೆ ಎಂದು ಶಾಸಕರು ತಿಳಿಸಿದರು.
ಪ್ರಭಾರ ಪರಿಸರಾಧಿಕಾರಿ ಉಮಾವತಿ ಸ್ವಾಗತಿಸಿದರು. ಇತರೆ ಅಧಿಕಾರಿಗಳು ಹಾಜರಿದ್ದರು.
10 ತಿಂಗಳಿಂದ ಬಾಡಿಗೆ ಬಾಕಿ
ಪುರಸಭೆಯಲ್ಲಿ ಟೆಂಡರ್ ಕರೆದು ವಷ೯ ಆರ್ಡರ್ ನೀಡಿ ಪುರಸಭೆಗೆ ಬಾಡಿಗೆಗೆ ಪಡೆದ ವಾಹನದ 10 ತಿಂಗಳ ಬಾಡಿಗೆ ನೀಡದ ಬಗ್ಗೆಯು ಸಭೆಯಲ್ಲಿ ವಾಹನ ಚಾಲಕ ಶಾಸಕರ ಗಮನಸೆಳೆದರು.ತಕ್ಷಣ ಚಾಲಕನ ಬಾಡಿಗೆ ಪಾವತಿಗೆ ಕ್ರಮಕ್ಕೆ ಆಡಳಿತಾಧಿಕಾರಿಯವರಿಗೆ ಸೂಚಿಸಿದರು.