ಹಕ್ಕೇ ಇಲ್ಲದ ಜಮೀನಿನಲ್ಲಿ ನೀರಿನ ಟ್ಯಾಂಕ್ಗೆ ಅರಣ್ಯ ಇಲಾಖೆ ತಡೆ...! ನಾಗರಿಕ ಸಮಿತಿಯಿಂದ ಪ್ರತಿಭಟನೆ: ತಹಶೀಲ್ದಾರ್, ಆರ್ಎಫ್ಒ, ಜಿಪಂ ಅಧಿಕಾರಿ ಭೇಟಿ
ಜಿಲ್ಲೆಯಲ್ಲಿ 2 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿದ್ದು, ಈ ತಿಂಗಳಲ್ಲೇ ನೀರಿನ ಅಭಾವ ಉಂಟಾಗಿದೆ. ಕುಡಿಯುವ ನೀರಿನ ತುರ್ತು ಯೋಜನಗೆ ಅರಣ್ಯ ಇಲಾಖೆ ಅನಗತ್ಯ ಅಡ್ಡಿ ಉಂಟು ಮಾಡಿ ಟ್ಯಾಂಕ್ ನಿರ್ಮಾಣಕ್ಕೆ ತಡೆಯುಂಟು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಪ್ರತಿಭಟನಕಾರರು ಒಕ್ಕೊರಲಿನಿಂದ ಖಂಡಿಸಿದರು.
ತಹಶೀಲ್ದಾರ್ ಅನಂತ ಶಂಕರ, ಆರ್ಎಫ್ಒ ವಾರಿಜಾಕ್ಷಿ, ಕಂದಾಯ ಪರಿವೀಕ್ಷಕ ಇಜ್ಜಾರ್ ಶಬ್ಬೀರ್, ವಿ.ಎ. ಪ್ರದೀಪ್ ಕುಮಾರ್, ಪಿ.ಡಿ.ಒ. ಆಶಾಲತಾ, ಗ್ರಾ, ಸಹಾಯಕ ಸ್ಟ್ಯಾನಿ ಡಿಸೋಜಾ, ಜಿ.ಪಂ. ಎಂಜಿನಿಯರ್ ಉದಯಕುಮಾರ್ ಶೆಟ್ಟಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಅರಣ್ಯ ಇಲಾಖೆ ನಿರ್ಲಕ್ಷ್ಯ..
ಟ್ಯಾಂಕ್ ನಿರ್ಮಾಣ ಸ್ಥಳವು ಸರಕಾರಿ ಜಮೀನು ಆಗಿದ್ದು ಈ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಭೂ ಮಾಪಕರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಜಂಟಿಅಳತೆ ಮಾಡಿದ ಸಂದರ್ಭದಲ್ಲಿ ಸದ್ರಿ ಜಮೀನು ಡೀಮ್ಡ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟವಾಗಿತ್ತು. ಆದರೆ ಅರಣ್ಯಾಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ಇಕ್ಕೆಲಗಳಲ್ಲಿ ರಸ್ತೆ ಇರುವ ಸರಕಾರಿ ಖಾಲಿಜಮೀನಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ನಾಗರಿಕ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳು ಮೇಲಧಿಕಾರಿಗಳಿಗೆ ಕನಿಷ್ಟ ಒಂದೂ ಪತ್ರವನ್ನು ಬರೆದಿಲ್ಲ ಎಂಬುದು ತೀರಾ ದುರದೃಷ್ಟಕರ ಎಂದು ಅವರು ಹೇಳಿದರು.
ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಮಾತನಾಡಿ, ರಸ್ತೆ ಮಾರ್ಜಿನ್ನಲ್ಲಿ, ಲೋಕೋಪಯೋಗಿ ಇಲಾಖೆ ಅನುಮತಿ ಇಲ್ಲದೆ, ವಿದ್ಯುತ್ ತಂತಿಯ ಕೆಳಗೆ ಗಿಡಗಳನ್ನು ನೆಟ್ಟು ಸೋಗಿನ ಪರಿಸರ ಪ್ರೇಮ ವ್ಯಕ್ತಪಡಿಸುವ ಅರಣ್ಯ ಇಲಾಖೆಗೆ ಸಾರ್ವಜನಿಕರ ಕುಡಿಯುವ ನೀರಿನ ತುರ್ತು ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಬೆಳ್ಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಕ್ರಮನೆ, ಗ್ರಾ.ಪಂ.ಮಾಜಿ ಸದಸ್ಯರಾದ ಎ.ಜಿ. ಡಿಸೋಜಾ, ಗುರುರಾಜ ಭಟ್, ಅಶೋಕ್, ಐವನ್ ದಲ್ಮೇದಾ, ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಅಧ್ಯಕ್ಷ ರಾಜು ಪಾಣಾರ, ಸ್ಥಳೀಯ ಮುಖಂಡರಾದ ಫ್ರಾನ್ಸಿಸ್ ಕಸ್ತಲೀನೋ, ರಾಮ ಕೇನೆಕುಂಜ, ಶಾಂತಾರಾಮ, ರವಿ ಕಾಡಬೆಟ್ಟು, ಸಂದೇಶ್, ವಿಜಯ್, ದಯಾನಂದ ಭಂಡಾರಿ, ಅನಿಲ್ ಆಳ್ವಾ, ಸೂರಜ್ ಪೂಜಾರಿ, ಗಣೇಶ ಕುಲಾಲ್, ರಮೇಶ್ ಅಬ್ಬು ಪಡುಬೆಳ್ಳೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ನಾಗರಿಕ ಸಮಿತಿ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
ಡಿಸಿಗೆ ವರದಿ:
ಸ್ಥಳ ಪರಿಶೀಲನೆ ನಡೆಸಿದ ಕಾಪು ತಹಶೀಲ್ದಾರ್ ಅನಂತ ಶಂಕರ್ ಅವರು ಸರಕಾರಿ ಜಮೀನಿನಲ್ಲಿ ಯಾವುದೇ ಮರಗಳಿರುವುದಿಲ್ಲ. ಕೇವಲ 3 ಸೆಂಟ್ಸು ಜಮೀನಿನಲ್ಲಿ ಟ್ಯಾಂಕ್ ನಿರ್ಮಾಣ ಸಾಧ್ಯವಿದೆ ಎಂಬ ಬಗ್ಗೆ ಸ್ಥಳ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.
ನಕಲಿ ಪರಿಸರವಾದಿಗಳ ಹಾವಳಿ:
ತಾವು ಪರಿಸರವಾದಿಗಳು ಎಂದು ಹೇಳಿಕೊಂಡು ಸಾರ್ವಜನಿಕ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿರುವವರ ಮಾತನ್ನು ಅರಣ್ಯ ಇಲಾಖೆ ಕೇಳುತ್ತಿದೆಯೇ ಹೊರತು ಕುಡಿಯುವ ನೀರಿಲ್ಲದೆ ಪರಿತಪಿಸುವ ಜನರು ಮಾತನ್ನು ಕೇಳುವ ಸೌಜನ್ಯ ತೋರುತ್ತಿಲ್ಲ. ಇಷ್ಟು ಸಮಯವಾದರೂ ಎಸಿಎಫ್/ಡಿಎಫ್ಒ ಸ್ಥಳಕ್ಕೆ ಭೇಟಿ ನೀಡಿಲ್ಲ. ನಕಲಿ ಪರಿಸರವಾದಿಗಳು ಅರಣ್ಯ ಸಂಬಂಧಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಶಂಕೆಯೂ ಇದೆ. -ರಾಜೇಂದ್ರ ಶೆಟ್ಟಿ, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ
1,200 ಕೋಟಿ ರೂ. ವ್ಯರ್ಥ...:
ವಾರಾಹಿಯಿಂದ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಪೈಪ್ಲೈನ್, ಓವರ್ಹೆಡ್ ಟ್ಯಾಂಕ್, ಜಡ್.ಬಿ.ಟಿ. ಸ್ಥಾಪನೆ ಸಹಿತ ಎಲ್ಲ ಪ್ರಕ್ರಿಯೆಗಳಿಗೆ ಸುಮಾರು 1,200 ಕೋಟಿ ರೂ. ಟೆಂಡರ್ ಆಗಿದ್ದು, ಈಗಾಗಲೇ ಸುಮಾರು 800 ಕೋಟಿ ರೂ. ಗುತ್ತಿಗೆ ಸಂಸ್ಥೆಗೆ ಬಿಡುಗಡೆಯಾಗಿದೆ. ಆದರೆ ಅರಣ್ಯ ಇಲಾಖೆ ನಿಧಾನ ಧೋರಣೆ ಹಾಗೂ ಅನಗತ್ಯ ಹಸ್ತಕ್ಷೇಪದಿಂದ ಈ ಯೋಜನೆಯೇ ವ್ಯರ್ಥವಾಗುವ ಆತಂಕ ಎದುರಾಗಿದ್ದು ಸರಕಾರದ ಜನಸಾಮಾನ್ಯರ ತೆರಿಗೆ ಹಣ 1,200 ಕೋಟಿ ವ್ಯರ್ಥವಾಗಲಿದೆಯೇ ಎಂಬುದು ಜನರ ಆತಂಕವಾಗಿದೆ.