ವೃಕ್ಷ ಸಂರಕ್ಷಕ `ಕಾಂಕೂಡ್' ತಂತ್ರಜ್ಞಾನದ ಹರಿಕಾರ ಎಸ್.ಕೆ. ಆನಂದ್‌ಗೆ ಡಾ. ಶಿವರಾಮ ಬಾಲವನ ಪ್ರಶಸ್ತಿ: ಅ.10 ಪ್ರಶಸ್ತಿಪ್ರದಾನ ಸಮಾರಂಭ

ವೃಕ್ಷ ಸಂರಕ್ಷಕ `ಕಾಂಕೂಡ್' ತಂತ್ರಜ್ಞಾನದ ಹರಿಕಾರ ಎಸ್.ಕೆ. ಆನಂದ್‌ಗೆ ಡಾ. ಶಿವರಾಮ ಬಾಲವನ ಪ್ರಶಸ್ತಿ: ಅ.10 ಪ್ರಶಸ್ತಿಪ್ರದಾನ ಸಮಾರಂಭ


ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ  ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ನೀಡಲಾಗುವ ಪ್ರತಿಷ್ಠಿತ `ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026'ಗೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ `ಮಾಸ್ಟರ್ ಪ್ಲಾನರಿ' ಸಂಸ್ಥೆಯ ಮುಖ್ಯಸ್ಥ ಎಸ್. ಕೆ. ಆನಂದ್ ಅವರನ್ನು ಆಯ್ಕೆ ಮಾಡಲಾಗಿದೆ. ಅ.10ರಂದು ಬಾಲವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿಪ್ರದಾನ ಮಾಡಲಾಗುವುದು ಎಂದು ಬಾಲವನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ತಿಳಿಸಿದರು.

ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಡಾ. ಶಿವರಾಮ ಕಾರಂತರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ವೈಜ್ಞಾನಿಕ ಮನೋಭಾವ, ಪ್ರಾಯೋಗಿಕ ಪರಿಸರ ಕಾಳಜಿ ಮತ್ತು ಸುಸ್ಥಿರ ಜೀವನ ಶೈಲಿಯನ್ನು ತಮ್ಮ ವೃತ್ತಿಬದುಕಿನಲ್ಲಿ ಅಕ್ಷರಶಃ ಸಾಕಾರಗೊಳಿಸಿದ ವಿಶಿಷ್ಟ ಸಾಧಕ ಪುತ್ತೂರಿನ ಎಸ್. ಕೆ. ಆನಂದ್. ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ 'ಕಾಂಕೂಡ್' ಎಂಬ ಪರ್ಯಾಯ ವಸ್ತುವನ್ನು ಆವಿಷ್ಕರಿಸಿ, ದೇಶದಲ್ಲೇ ಬೃಹತ್ ವೃಕ್ಷ ರಕ್ಷಣಾ ಕ್ರಾಂತಿ ನಡೆಸಿದ ಅಪೂರ್ವ ಕೊಡುಗೆಗಾಗಿ ಈ ಅತ್ಯುನ್ನತ ರಾಜ್ಯ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

`ಕಾಂಕೂಡ್' ಅಂದರೆ ಮರಕ್ಕೆ ಸಂಪೂರ್ಣ ಪರ್ಯಾಯವಾದ ಕಾಂಕ್ರೀಟ್ ಉತ್ಪನ್ನಗಳಾಗಿದ್ದು, ಭಾರತದಲ್ಲಿ ಮರಕ್ಕೆ ಪರ್ಯಾಯ ಕಾಂಪೋಸಿಟ್ ಕಲ್ಪನೆ ಪ್ರಥಮಬಾರಿಗೆ ಮಾಸ್ಟರ್ ಪ್ಲಾನರಿ ಮೂಲಕ ಆರಂಭಿಸಿದ ಅವರು  ತಮ್ಮ ಈ ವಿನೂತನ ಸಂಶೋಧನೆ 'ಕಾಂಕೊಡ್' ಪದಕ್ಕೆ 2007ರಲ್ಲೇ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯನ್ನೂ ಪಡೆದಿದ್ದಾರೆ. ನಾಗರಹೊಳೆ-ಚಾಮರಾಜನಗರದ ಗಿರಿಜನರಿಗಾಗಿ 8 ಸಾವಿರಕ್ಕೂ ಹೆಚ್ಚು ಮನೆ ನಿರ್ಮಿಸಿ ಕೊಟ್ಟಿದ್ದಾರೆ. 

ಪರಿಸರದ ಸುಮಾರು 35 ಲಕ್ಷಕ್ಕೂ ಅಧಿಕವಾದ ಮರಗಳು ಕೊಡಲಿಗೆ ಬಲಿಯಾಗದಂತೆ ರಕ್ಷಿಸುವ ಜನತೆಗೆ ಪುತ್ತೂರು ತಾಲೂಕಿನ ಸೊರಕೆ, ಕೊಡಿಪ್ಪಾಡಿ 50ಕ್ಕೂ ಹೆಚ್ಚು ಎಕರೆಯಲ್ಲಿ ಅತ್ಯಮೂಲ್ಯ ಗಿಡಗಳನ್ನು ಬೆಳೆಸಿ ಹಸಿರುಕಾಡನ್ನು ಸೃಷ್ಟಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ 800ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ಇದರಲ್ಲಿ 200ಕ್ಕೂ ಹೆಚ್ಚು ಮಹಿಳಾ ಸಿಬಂದಿಗಳಿದ್ದಾರೆ. ಎಸ್.ಕೆ.ಆನಂದ್ ಹಾಗೂ ಅವರ ಪತ್ನಿ ರೇಖಾ ಆನಂದ್ ಅವರ ಮಕ್ಕಳಾದ ಅಕ್ಷಯ್, ಅರ್ಜುನ್, ಆಕಾಶ್ ಮತ್ತು ಆರತಿ ಸಿವಿಲ್ ಇಂಜಿನಿಯರ್ ಪದವೀಧರರಾಗಿದ್ದು, ಇಂಜಿನಿಯರ್ ಕ್ಷೇತ್ರದಲ್ಲಿ ವಿಶಿಷ್ಠ ದಾಖಲೆಯಾಗಿದೆ. ಇವರ ಸೇವೆಗೆ ಪರಿಸರಪ್ರೇಮಿ, ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್, ಜೇಸಿಐಯಿಂದ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. 

ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಶಿಕ್ಷಕರಾದ ರಮೇಶ್ ಉಳಯ ಮತ್ತು ಜಗನ್ನಾಥ್ ಅರಿಯಡ್ಕ ಉಪಸ್ಥಿತರಿದ್ದರು. 


ಕಾರಂತ ಅಧ್ಯಯನ ಪೀಠ ಚಿಂತನೆ

ಡಾ.ಶಿವರಾಮ ಕಾರಂತ ಅವರ ಹತ್ತು ಹಲವು ಕೃತಿಗಳ ರಚನಾ ನೆಲೆಯಾದ ಬಾಲವನದ ಸಮಗ್ರ ಅಭಿವೃದ್ಧಿಗಾಗಿ 2 ಕೋಟಿ ಅನುದಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಲಾಗಿದೆ. ಬಾಲವನದಲ್ಲಿ ಕಾರಂತ ಅಧ್ಯಯನ ಪೀಠ ಸ್ಥಾಪನೆ, ಧ್ಯಾನಮಂದಿರ, ವಾಕ್ ಪಾಥ್, ಸುಸಜ್ಜಿತ ಮಕ್ಕಳ ಆಟೋಟ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ನಗರಸಭೆಯ ಅನುದಾನದಿಂದ ಬಾಲವನ ಸುಂದರವಾಗಿ ಕಾಣುವಂತೆ ಆಕರ್ಷಿಸುವ ನಿಟ್ಟಿನಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್ ರೈ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article