ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಓರ್ವ ಸಾವು

ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಓರ್ವ ಸಾವು


ಕುಂದಾಪುರ: ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಕುಂದಾಪುರ ನಗರದ ಭಂಡಾರ್ಕಾರ್ಸ್ ರಸ್ತೆ ನಿವಾಸಿ ಅಜಿತ್ ಪೌಲ್ ಲೂಯಿಸ್ (55) ಮೃತರು ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಜಿತ್ ಪೌಲ್ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತಂದರೂ ಅಜಿತ್ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಕಾರು ಚಾಲಕನ ವೇಗದ ಚಾಲನೆ ಮತ್ತು ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರು ವೇಗವಾಗಿದ್ದ ಕಾರಣ ಕೆಲ ದೂರ ಸ್ಕೂಟಿ ಸಮೇತ ಸವಾರನನ್ನು ಎಳೆದೊಯ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಯಿ ನೋಡಲು ಬಂದಿದ್ದ ಮಗ:

ಅಜಿತ್ ಪೌಲ್ ದೆಹಲಿಯಲ್ಲಿ ಕಂಪೆನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು ವರ್ಷದಲ್ಲಿ ನಾಲ್ಕೈದು ಬಾರಿ ಊರಿಗೆ ಬರುತ್ತಿದ್ದರು. ಈ ಬಾರಿ ತಾಯಿ ಅನಾರೋಗ್ಯದ ಹಿನ್ನೆಲೆ ಕಳೆದ 8-10 ದಿನಗಳ ಹಿಂದಷ್ಟೆ ಊರಿಗೆ ಆಗಮಿಸಿದ್ದರು. ಮುಳ್ಳಿಕಟ್ಟೆ ಸಮೀಪದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಪುತ್ರಿಯ ಶೈಕ್ಷಣಿಕ ಪ್ರಗತಿ ತಿಳಿಯಲು ಸೋಮವಾರ ಮಧ್ಯಾಹ್ನದ ಸುಮಾರಿಗೆ ಶಾಲೆಗೆ ಭೇಟಿ ನೀಡಲೆಂದು ಹೋಗುತ್ತಿದ್ದ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕುಂದಾಪುರ ಸಂಚಾರ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಮೆಗತಿ ಕಾಮಗಾರಿಯಿಂದ ಅವಘಡಗಳು: 

ವರ್ಷಗಳಿಂದ ಇಲ್ಲಿನ ಅರಾಟೆ ಸೇತುವೆ ದುರಸ್ಥಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ ಒಂದು ಕಡೆಯ ಸೇತುವೆ ಬಂದ್ ಮಾಡಿ ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಿತ್ಯವೂ ಸಣ್ಣಪುಟ್ಟ ಅವಘಡಗಳು ನಡೆಯುತ್ತಲೇ ಇವೆ. ಇಲಾಖೆಯು ರಿಪ್ಲೆಕ್ಟರ್ ಕೋನ್ ಅಳವಡಿಕೆಯಂತಹ ಜಾಗೃತಿ ಕೆಲಸ ಮಾಡಿದರೂ ರಾತ್ರಿ ಸಮಯದಲ್ಲಿ ಘನ ವಾಹನಗಳ ಓಡಾಟದಿಂದ ರಿಫ್ಲೆಕ್ಟರ್‌ಗಳು ಸಂಪೂರ್ಣ ನಾಶವಾಗಿವೆ. 

ವಾಹನ ಸವಾರರು ಪಥ ಶಿಸ್ತು ಪಾಲನೆ ಮಾಡದಿರುವುದು, ಅಜಾಗರೂಕವಾಗಿ, ವೇಗವಾದ ಚಾಲನೆ, ಅವಸರದಿಂದ ಮುನ್ನುಗ್ಗುವುದು ಕೂಡ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದ್ದು ಸಾವು-ನೋವುಗಳು ಹೆಚ್ಚಿದೆ. ಅರಾಟೆ ಸೇತುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿಯ ಎರಡೂ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಆಗ್ರಹ ಕೇಳಿಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article