ಬರ ಇದೆ, ಮೈಸೂರಿನಲ್ಲಿ ಕಂಬಳ ಬೇಡ: ಎ.ಟಿ. ರಾಮಸ್ವಾಮಿ
ಮಂಗಳೂರು: ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಬಳ ಕ್ರೀಡೆ ಆಯೋಜಿಸುವುದು ಬೇಡ ಎಂದು ಕರಾವಳಿಯ ಜನತೆಯಲ್ಲಿ ಮನವಿ ಮಾಡುವುದಾಗಿ ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳದ ಬಗ್ಗೆ ನಮಗೆಲ್ಲ ಅಪಾರ ಗೌರವ ಮತ್ತು ಅಭಿಮಾನವಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನಲ್ಲಿ ಕಂಬಳ ಆಯೋಜಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ದನಕರು, ಆಡು-ಕುರಿಗಳಿಗೆ ನೀರು ಮತ್ತು ಮೇವಿನ ಅಭಾವ ಎದುರಾಗಿದೆ. ಅಕ್ಟೋಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.