‘ಬರ ಪರಿಹಾರದ ಹಣ ಬಂದ ಕೂಡಲೇ ಅದಕ್ಕೆ ಒಂದು ರೂಪಾಯಿ ಸೇರಿಸಿ ಮುಖ್ಯಮಂತ್ರಿ ನಿಧಿಗೆ’: ಎ.ಟಿ. ರಾಮಸ್ವಾಮಿ

‘ಬರ ಪರಿಹಾರದ ಹಣ ಬಂದ ಕೂಡಲೇ ಅದಕ್ಕೆ ಒಂದು ರೂಪಾಯಿ ಸೇರಿಸಿ ಮುಖ್ಯಮಂತ್ರಿ ನಿಧಿಗೆ’: ಎ.ಟಿ. ರಾಮಸ್ವಾಮಿ


ಮಂಗಳೂರು: ಸೂಪರ್ ಎಲ್ ನಿನೋ ಪರಿಣಾಮ ಭಯಾನಕವಾಗಿರಲಿದೆ ಎಂಬ ವರದಿಗಳಿವೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಕೇವಲ 2,500 ರೂ. ಬರ ಪರಿಹಾರ ಘೋಷಿಸಿರುವುದು ಅವಮಾನಕರ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಪರಿಹಾರದ ಹಣ ಬಂದ ಕೂಡಲೇ ಅದಕ್ಕೆ ಒಂದು ರೂಪಾಯಿ ಸೇರಿಸಿ, ಒಟ್ಟು 2,501 ರೂ.ಗಳನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡಲು ರಾಜ್ಯದ ರೈತರು ತೀರ್ಮಾನಿಸಿದ್ದಾರೆ ಎಂದು  ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೈಸೂರು ಜಿಲ್ಲೆಯೂ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ 2,991 ಕೆರೆಗಳ ಪೈಕಿ 2,928 ಕೆರೆಗಳಲ್ಲಿ ನೀರಿಲ್ಲ. ಕೇವಲ 63 ಕೆರೆಗಳು ಮಾತ್ರ ತುಂಬಿವೆ. ಮೈಸೂರು ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳು ಬತ್ತಿಹೋಗಿವೆ. ನಗರದ ಹಲವಾರು ಬಡಾವಣೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಕಾವೇರಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಇವುಗಳ ಒಟ್ಟು ನೀರಿನ ಸಂಗ್ರಹ ಕಳೆದ ವರ್ಷದ ಸಂಗ್ರಹದ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದರು.

ಮೈಸೂರಿನಲ್ಲಿ ಕಂಬಳ ಆಯೋಜಿಸಲು ಆಯ್ಕೆ ಮಾಡಿರುವ ಜಾಗವನ್ನು ಉದ್ಯಾನವನಕ್ಕಾಗಿ ಮೀಸಲಿಡಲಾಗಿತ್ತು. ಈ ಪ್ರದೇಶದಲ್ಲಿ ನೂರಾರು ಮರಗಳು, ಸಣ್ಣಪುಟ್ಟ ಗಿಡಗಂಟಿಗಳು, ಪೊದೆಗಳು, ಬತ್ತಿಹೋದ ಕೆರೆ ಹಾಗೂ ಮೊಲ, ಅಳಿಲು ಸೇರಿದಂತೆ ಸಣ್ಣ ಪ್ರಾಣಿಗಳು ಮತ್ತು ಪಕ್ಷಿಗಳ ಜೀವವೈವಿಧ್ಯವಿತ್ತು. ಆದರೆ, 50ಕ್ಕೂ ಹೆಚ್ಚು ಮರಗಳು ಹಾಗೂ ನೂರಾರು ಗಿಡಗಂಟಿಗಳನ್ನು ತೆರವುಗೊಳಿಸಿ, ಅವುಗಳನ್ನು ಆಶ್ರಯಿಸಿದ್ದ ಜೀವಪರಿಸರ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ. ಕೆರೆಯ ಅಂಗಳವನ್ನು ಮುಚ್ಚಿ ಕೋಣಗಳ ಓಟಕ್ಕೆ ಕಣ ಸಿದ್ಧಪಡಿಸಲಾಗಿದೆ. ಮರಗಳನ್ನು ಕಡಿದಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯೂ ಎಫ್‌ಐಆರ್ ದಾಖಲಿಸಿದೆ ಎಂದು ರಾಮಸ್ವಾಮಿ ಆರೋಪಿಸಿದರು. 

ಮೈಸೂರು ದಸರಾ ಸಂದರ್ಭದಲ್ಲಿ ವಿಶ್ವವಿಖ್ಯಾತ ಅಂಬಾರಿ ಮೆರವಣಿಗೆಯ ಜೊತೆಗೆ ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ, ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಲೇಸರ್ ಶೋ ಹಾಗೂ ಕ್ರೀಡಾಕೂಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ, ಈ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸುತ್ತಿಲ್ಲ ಎಂಬುದು ಮೈಸೂರು ನಾಗರಿಕರ ಅಳಲಾಗಿದೆ ಎಂದು ಅವರು ತಿಳಿಸಿದರು.

ಈ ಎಲ್ಲ ಕಾರಣಗಳಿಂದಾಗಿ ಮೈಸೂರಿನಲ್ಲಿ ಕಂಬಳ ಆಯೋಜನೆ ವಿರೋಧಿಸಿ ಕಳೆದ ಮೂರು ತಿಂಗಳಿಂದ ಹೋರಾಟ ಮತ್ತು ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆ ಹಾಗೂ ನಾಡಿನ ಹಲವಾರು ಸಾಹಿತಿಗಳು ಮತ್ತು ಕಲಾವಿದರು ಕೂಡ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಹೋರಾಟ ಮತ್ತು ಪ್ರತಿಭಟನೆ ನಡೆಸಿದರೂ ಸರ್ಕಾರ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಕಂಬಳ ಆಯೋಜಕರೂ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ಕೊನೆಯ ಪ್ರಯತ್ನವಾಗಿ ಕರಾವಳಿಯ ಜನರು ಹಾಗೂ ಕಂಬಳದ ಕೋಣಗಳ ಮಾಲೀಕರಿಗೆ ಮನವಿ ಮಾಡಲು ಮಂಗಳೂರಿಗೆ ಬಂದಿದ್ದೇವೆ. ಕಂಬಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿರುವ ಕೋಣಗಳ ಮಾಲೀಕರು ನಮ್ಮ ಮನವಿಗೆ ಸ್ಪಂದಿಸಿ, ನೋಂದಣಿ ರದ್ದುಗೊಳಿಸಿ ಕಂಬಳದಿಂದ ಹಿಂದೆ ಸರಿಯಬೇಕು ಎಂದು ಅತ್ಯಂತ ವಿನಯಪೂರ್ವಕವಾಗಿ ವಿನಂತಿಸುತ್ತೇವೆ. ಕರಾವಳಿಯ ಪ್ರಜ್ಞಾವಂತ ಜನರು ಕೋಣಗಳ ಮಾಲೀಕರ ಮನವೊಲಿಸಿ, ಕಂಬಳದಿಂದ ಹಿಂದೆ ಸರಿಯುವಂತೆ ಮಾಡಬೇಕು ಎಂದು ಎ.ಟಿ. ರಾಮಸ್ವಾಮಿ ಕಳಕಳಿಯಿಂದ ಮನವಿ ಮಾಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಹೋರಾಟಗಾರ್ತಿ ಲೀಲಾ ಶಿವಕುಮಾರ್, ಲೇಖಕಿ ಹಾಗೂ ಅಂಕಣಗಾರ್ತಿ ಕುಸುಮ ಆಯರಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article