ನಾರಾಯಣ ಗುರು ವಿಚಾರ ವೇದಿಕೆ: ಅ.11ರಂದು ಪದಗ್ರಹಣ

ನಾರಾಯಣ ಗುರು ವಿಚಾರ ವೇದಿಕೆ: ಅ.11ರಂದು ಪದಗ್ರಹಣ

ಮಂಗಳೂರು: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಜಿಲ್ಲೆಯ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅ.11 ರಂದು ಬೆಳಗ್ಗೆ 10 ಗಂಟೆಗೆ ನಗರದ ಪಂಪ್‌ವೆಲ್ ಬಳಿಯ ಕಪಿತಾನಿಯೋದ ಸುಮುಖ ಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಪ್ರಾರಂಭಿಸಲು ಕಳೆದ ಒಂದೂವರೆ ತಿಂಗಳಲ್ಲಿ ಅನೇಕ ಯಶಸ್ವಿ ಸಭೆ ನಡೆಸಿ, ಮೊದಲು ಜಿಲ್ಲಾ ಸಮಿತಿಯನ್ನು ರಚಿಸಿ, ನಂತರ ಮಂಗಳೂರು ದಕ್ಷಿಣ, ಉಳ್ಳಾಲ, ಬೆಳ್ತಂಗಡಿ, ಮೂಡುಬಿದಿರೆ, ಬಂಟ್ವಾಳ ತಾಲೂಕು ಸಮಿತಿಯನ್ನು ರಚಿಸಲಾಗಿದೆ. ಅ.೧೧ರಂದು ಗುರುಪೂಜೆಯೊಂದಿಗೆ ಬೆಳಗಾವಿ ಮಹಾಕಾಳಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ತಾಲೂಕು, ಜಿಲ್ಲಾ ನಿಯೋಜಿತ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಗರೋಡಿ ಉದ್ಘಾಟಿಸುವರು. 

ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅಧ್ಯಕ್ಷತೆ ವಹಿಸುವರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಬಂದಲೆ ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆ ಗುತ್ತು ಧರ್ಮದರ್ಶಿ ಸತೀಶ್ ಪೂಜಾರಿ ಬಂದಲೆ, ಗೆಜ್ಜೆಗಿರಿ ದೇಯಿ ಬೈದೈತಿ ಕೋಟಿಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ನಾಯಕ ನಟರಾದ ಅರ್ಜುನ್ ದೇವ್, ಅನುಪ್ ಸಾಗರ್ ಹಾಗೂ ವೇದಿಕೆಯ ಪದಾಧಿಕಾರಿಗಳು ಭಾಗವಹಿಸುವರು ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕುಲಗುರುಗಳಾಗಿ ಸ್ವೀಕರಿಸಿಕೊಂಡು, ಅವರ ತತ್ವ, ಆದರ್ಶದ ಅಡಿಯಲ್ಲಿ ಬದುಕುತ್ತಿರುವ ಬಿಲ್ಲವ, ತೀಯ, ಈಡಿಗ, ನಾಮಧಾರಿ, ದೀವರು ಮುಂತಾದ 26 ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಗುರುಗಳು ಹೇಳಿದಂತೆ ಸಂಘಟಿಸಿ, ಸಮಾಜದ ಅಭ್ಯುದಯಕ್ಕಾಗಿ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠಗೊಳಿಸಲು ಮತ್ತು ಸಮಾಜಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತು, ಸೌಲಭ್ಯಗಳನ್ನು ಪಡೆಯಬೇಕಾದ ಸಂದರ್ಭದಲ್ಲಿ ಹೋರಾಟ ನಡೆಸಲು ಆರು ವರ್ಷಗಳ ಹಿಂದೆ ರೂಪುಗೊಂಡ ವೇದಿಕೆ ಸಂಘಟನೆ ರಾಜ್ಯಾದ್ಯಂತ ಅನೇಕ ಯಶಸ್ವಿ ಹೋರಾಟಗಳನ್ನು ಸಂಘಟಿಸಿದೆ ಎಂದರು.

ವೇದಿಕೆಯ ನಿಯೋಜಿತ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಶ ಸುವರ್ಣ, ಪ್ರಮುಖರಾದ ಸಂದೀಪ್ ಪಂಪ್ವೆಲ್, ಸಂಪತ್, ನಾಗೇಶ್ ಎಕ್ಕೂರು, ಕಿಶೋರ್ ಮಂಚಿ, ಜಯರಾಮ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article