ರಾಜ್ಯ ಸರಕಾರದಿಂದ 1500 ಕೋಟಿ ಭ್ರಷ್ಟಾಚಾರ: ಶಾಸಕ ಹರೀಶ್ ಪೂಂಜ

ರಾಜ್ಯ ಸರಕಾರದಿಂದ 1500 ಕೋಟಿ ಭ್ರಷ್ಟಾಚಾರ: ಶಾಸಕ ಹರೀಶ್ ಪೂಂಜ

ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯ: ಬಿಜೆಪಿ ಹಕ್ಕೊತ್ತಾಯ ಸಭೆ


ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಕಡಿಮೆ ಮೊತ್ತ ಪಾವತಿಯಾಗಿದ್ದು, ರಾಜ್ಯ ಕಾಂಗ್ರೆಸ್ ಸರಕಾರ 1500 ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ವಿಮಾ ಕಂಪೆನಿಯಿಂದ ರಾಜ್ಯ ಸರಕಾರ ಲಂಚ ಪಡೆದು ರೈತರಿಗೆ ಅತಿ ಕಡಿಮೆ ಮೊತ್ತ ನೀಡಲಾಗಿದೆ ಎಂದು ಆರೋಪಿಸಿರುವ ಶಾಸಕ ಹರೀಶ್ ಪೂಂಜ, 2019ರಿಂದ 2023ರ ಅವಧಿಯಲ್ಲಿ ರೈತರಿಗೆ ಪಾವತಿಯಾಗುತ್ತಿದ್ದ ಪ್ರಮಾಣದಲ್ಲೇ ಬೆಳೆ ವಿಮೆ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಡಿಕೆ ಹಾಗೂ ಇತರ ಬೆಳೆಗಾರರಿಗೆ ಬೆಳೆವಿಮೆ ಪರಿಹಾರದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಬಿಜೆಪಿ ದ.ಕ. ಜಿಲ್ಲೆ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಬೆಳೆ ವಿಮೆ ಯೋಜನೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅವಽಯಲ್ಲಿ 2019ರಿಂದ 2023ರವರೆಗೆ ಯಶಸ್ವಿಯಾಗಿ ಅನುಷ್ಠಾನಗೊಂಡು ರೈತರಿಗೆ 2-3 ಲಕ್ಷ ರೂ.ವರೆಗೂ ಬೆಳೆ ವಿಮೆ ದೊರೆಯುತ್ತಿತ್ತು. ಓರ್ವ ರೈತರಿಗೆ 11 ಲಕ್ಷ ರೂ. ಬೆಳೆ ವಿಮೆ ಬಂದಿತ್ತು. ಆದರೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ವಿಮಾ ಮೊತ್ತ ಪಾವತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಮಳೆ ಮಾಪನ ಕೇಂದ್ರಗಳ ಸಮಸ್ಯೆಯಿಂದ ಮಳೆ ಪ್ರಮಾಣ ದಾಖಲಾಗದೆ ಬೆಳೆ ವಿಮೆ ಬರುತ್ತಿಲ್ಲ ಎಂದು ಹೇಳಲಾಯಿತು. ಬಳಿಕ ಜಿಲ್ಲೆಯ ಶಾಸಕರ ಸೂಚನೆಯಂತೆ ಎಲ್ಲ ಮಳೆ ಮಾಪನ ಘಟಕಗಳ ದುರಸ್ತಿ ನಡೆಸಲಾಗಿದೆ. ಆದರೂ, ಈ ಬಾರಿ ಮತ್ತೆ ರೈತರ ಬ್ಯಾಂಕ್ ಖಾತೆಗೆ ಕಡಿಮೆ ಮೊತ್ತ ಜಮೆಯಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿದಾಗ ರಾಜ್ಯ ಸರಕಾರ ವಿಮಾ ಕಂಪೆನಿ ಜತೆಗೆ ಟರ್ಮ್ ಶೀಟ್ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. ವಿಮಾ ಕಂಪೆನಿಗೆ ಅನುಕೂಲ ಮಾಡಿಕೊಡಲು ಈ ಒಪ್ಪಂದ ಬದಲಾವಣೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಸಚಿವರು ಅಥವಾ ಮುಖ್ಯಮಂತ್ರಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಅವರು ಆಪಾದಿಸಿದರು.

2019ರ ಟರ್ಮ್ಶೀಟ್ನಲ್ಲಿ ಬೆಳೆ ವಿಮೆ ಪಡೆಯಲು 126 ಮೀ.ಮೀ. ಮಳೆ ಬೀಳಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಅದನ್ನು 250 ಮೀ.ಮೀಗೆ ಹೆಚ್ಚಿಸಲಾಗಿದೆ. ರಾಜ್ಯ ಸರಕಾರದ ವಿಮಾ ಮೊತ್ತದ ಪಾಲನ್ನು ಹೆಚ್ಚಿಸಲಾಗಿದೆ. ಆದರೆ, ವಿಮಾ ಮೊತ್ತ ಕಡಿಮೆಯಾಗಿದೆ. ರಾಜ್ಯ ಸರಕಾರ ತನ್ನ ಪಾಲಿನ ಮೊತ್ತವನ್ನು ವಿಮಾ ಕಂಪೆನಿಗೆ ಸಮರ್ಪಕವಾಗಿ ಪಾವತಿಸಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು. ಬಿಸಿಲು ಜಾಸ್ತಿಯಾದರೂ ಎಳೆ ಅಡಿಕೆ ಉದುರುತ್ತದೆ. ಈ ಬಾರಿ ಮಳೆ ಕಡಿಮೆಯಾಗಿದೆ. ಹಾಗಾದರೆ ಮುಂದಿನ ವರ್ಷ ಬೆಳೆ ವಿಮೆ ನೀಡುವುದಿಲ್ಲವೇ? ಅತಿ ಮಳೆಯಾದರೆ ಮಾತ್ರ ಪರಿಹಾರ ಎಂಬುದನ್ನು ಮಾರ್ಪಡಿಸಿ ಹವಾಮಾನ ವೈಪರೀತ್ಯಕ್ಕೂ ಬೆಳೆ ವಿಮೆ ನೀಡಬೇಕು, ಪಾರದರ್ಶಕ ಟೆಂಡರ್ ನಡೆಸಿ, ವಿವರವನ್ನು ಜನಪ್ರತಿನಿಽಗಳು, ರೈತರಿಗೆ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, 2023ರ ಬಳಿಕ ರಾಜ್ಯ ಕಾಂಗ್ರೆಸ್ ಸರಕಾರ ಬೆಳೆವಿಮೆಯನ್ನು ದಂಧೆ ಮಾಡಿಕೊಂಡಿದೆ. ಒಪ್ಪಂದವನ್ನು ಯಾಕೆ ಬದಲಾವಣೆ ಮಾಡಲಾಗಿದೆ ಎಂಬುದಕ್ಕೆ ಸರಕಾರ ಉತ್ತರ ನೀಡಬೇಕು. ಕಾಂಗ್ರೆಸ್ಗೆ ರೈತರ ಶಾಪ ತಟ್ಟುತ್ತದೆ. ಜಿಲ್ಲೆಯ ರೈತರ ಪ್ರಶ್ನೆಗಳಿಗೆ ಸಚಿವ ಯು.ಟಿ. ಖಾದರ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಜನತೆಗೆ ಬದುಕೂ ಇಲ್ಲ, ಭಾವನೆಯೂ ಇಲ್ಲ. ಇದೊಂದು ಡೋಂಗಿ ಸರಕಾರವಾಗಿದೆ. ಗೃಹಲಕ್ಷ್ಮಿ ಹಣ, ಹಾಲಿನ ಸಬ್ಸಿಡಿ ನೀಡದ ರಾಜ್ಯ ಸರಕಾರ ಇದೀಗ ಬೆಳೆ ವಿಮೆಯ ಹಣದಲ್ಲೂ ರೈತರಿಗೆ ಮೋಸ ಮಾಡಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಅ.15ರಿಂದ ನ.15ರವರೆಗೆ ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯಿಂದ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಿಜೆಪಿ ಸರಕಾರ ಇದ್ದಾಗ ರೈತರಿಗೆ ಅನುಕೂಲವಾಗುವಂತೆ ಟರ್ಮ್ಶೀಟ್ ರೂಪಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ವಿಮಾ ಕಂಪೆನಿಗೆ ಅನುಕೂಲವಾಗುವಂತೆ ಟರ್ಮ್ಶೀಟ್ನಲ್ಲಿ ತಿದ್ದುಪಡಿ ನಡೆಸಿ, ರೈತರಿಗೆ ಕಡಿಮೆ ಮೊತ್ತ ದೊರೆಯುವಂತಾಗಿದೆ. ಇದಕ್ಕೆ ರಾಜ್ಯ ಸರಕಾರ ನೇರ ಹೊಣೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ಕುಮಾರ್ ಪುತ್ತೂರು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ಸಿಂಹ ನಾಯಕ್, ವಿಭಾಗ ಸಹಪ್ರಭಾರಿ ಜಯಂತ ಕೋಟ್ಯಾನ್, ಸಹಕಾರಿ ಭಾರತಿ ದ.ಕ. ಜಿಲ್ಲಾಧ್ಯಕ್ಷ  ಸುಧಾಕರ ರೈ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಗೌಡ ಬೆಳ್ತಂಗಡಿ, ಬಿಜೆಪಿ ವಿವಿಧ ಮಂಡಲಗಳ ಅಧ್ಯಕ್ಷರಾದ ವೆಂಕಟ್ ವಳಲಂಬೆ, ರಮೇಶ್ ಕಂಡೆಟ್ಟು, ಜಗದೀಶ ಆಳ್ವ, ಶಿವಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರ್ ಉಪಸ್ಥಿತರಿದ್ದರು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಸುನೀಲ್ಕುಮಾರ್ ದಡ್ಡು ವಂದಿಸಿದರು. 

ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಕ್ಕೊತ್ತಾಯ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article