ಅದ್ದೂರಿಯಾಗಿ ಉದ್ಘಾಟನೆಗೊಂಡ ಕುಡ್ಲದ ಪಿಲಿ ಪರ್ಬ-2026
Sunday, October 18, 2026
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಕುಡ್ಲದ ಪಿಲಿಪರ್ಬ-2026 ಸೀಸನ್ 5 ರ ಉದ್ಘಾಟನಾ ಸಮಾರಂಭವು ಧಾರ್ಮಿಕ ವಿಧಿವಿಧಾನಗಳನ್ವಯ ಗಣಹೋಮದ ನಂತರ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ಸ್ಪರ್ಶ ಲಭಿಸಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ 11 ಹುಲಿವೇಷ ತಂಡಗಳಿಗಳಿಗೂ ಶುಭ ಹಾರೈಸಿ ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಎಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರಿದರು. ಸ್ಪರ್ಧಾಕೂಟವು ಇಂದು ರಾತ್ರಿಯವರೆಗೂ ಅದ್ದೂರಿಯಾಗಿ ಸಾಗಲಿದ್ದು ಅಂತಿಮವಾಗಿ ವಿಜೇತ ತಂಡದ ಘೋಷಣೆಯಾಗಲಿದೆ. ಈ ನಡುವೆ ವೀಕ್ಷಕರಿಗಾಗಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿರುವುದು ವಿಶೇಷ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ನರೇಶ್ ಪ್ರಭು, ಸಹಾನ್ ಸೇರಿದಂತೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ನಿಕಟಪೂರ್ವ ಮ.ನ.ಪಾ ಸದಸ್ಯರು ಹಾಗೂ ಅನೇಕ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

