ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳ ಸಂಘಟನೆ: ದಕ್ಷಿಣ ಕನ್ನಡ ಜಿಲ್ಲೆಯ 6 ಮಂದಿ ಶಿಕ್ಷಕರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’
ಮಂಗಳೂರು ನಗರದಲ್ಲಿ ನಡೆದ ಕುಪ್ಮಾ ರಾಜ್ಯ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಕ್ಷಕರ ವೃತ್ತಿಪರ ಅನುಭವ, ಬೋಧನಾ ಕ್ಷೇತ್ರದಲ್ಲಿನ ಅನುಭವ, ಪ್ರವೃತ್ತಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಸಾಮಾಜಿಕ, ಸಾಹಿತ್ಯಿಕ ಕೊಡಗೆಯನ್ನು ಪರಿಗಣಿಸಿ 6 ಮಂದಿ ಶಿಕ್ಷಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರೊ. ಅನಿಲ್ ಮಸ್ಕರೇನಸ್, ಮೂಡುಬಿದಿರೆ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತಾ ರಾಮಚಂದ್ರ ಹೆಗ್ಡೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಐತಾಳ್, ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ನಾಯಕ್ ಕೆ, ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋಧ ಯು ಶೆಟ್ಟಿ, ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಕರುಣಾಕರ ಬಳ್ಕೂರು ಇವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಶಿಕ್ಷಕರಿಗೆ ಅ.13 ರಂದು ಸಂಜೆ 4.30ಕ್ಕೆ ಬೆಳ್ತಂಗಡಿ ‘ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್’ ಇಲ್ಲಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕುಪ್ಮಾ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಕುಪ್ಮಾ ಸಮಿತಿಯ ಗೌರವ ಅಧ್ಯಕ್ಷ ಡಾ. ಕೆ.ಸಿ ನಾಯ್ಕ್, ಡಾ. ಎಂ.ಬಿ. ಪುರಾಣಿಕ್, ಕೆ. ರಾಧಾಕೃಷ್ಣ ಶೆಣೈ, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್, ಉಪಾಧ್ಯಕ್ಷ ಡಾ.ಸುಧಾಕರ ಶೆಟ್ಟಿ, ರಾಜ್ಯ ಕುಪ್ಮಾ ಸಮಿತಿಯ ಕಾರ್ಯಕಾರಿಣಿ ಸದಸ್ಯರು ಸೇರಿದಂತೆ, ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಸಮಿತಿಯ ಗೌರವಾಧ್ಯಕ್ಷ ಡಾ ಸಂಜೀವ ರೈ, ಕಾರ್ಯದರ್ಶಿ ಡಾ. ಮಂಜುನಾಥ್ ಎಸ್. ರೇವಣಕರ್, ಜೊತೆ ಕಾರ್ಯದರ್ಶಿ ಅಶ್ವಿನ್ ಶೆಟ್ಟಿ, ಸುಮಂತ್ ಕುಮಾರ್ ಜೈನ್, ಉಪಾಧ್ಯಕ್ಷರುಗಳಾದ ಬಿ.ಎ. ನಝೀರ್, ಗಣೇಶ್ ಪ್ರಸಾದ್, ರವೀಂದ್ರ ಪಿ, ಪೂರನ್ ವರ್ಮ, ಚಂದ್ರಶೇಖರ ರಾಜೇ ಅರಸ್ ಹೆಚ್.ಆರ್., ಕೋಶಾಧಿಕಾರಿ ರಮೇಶ್ ಕೌಡೂರು ಅವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರೊ. ಯುವರಾಜ್ ಜೈನ್ ಅವರು ತಿಳಿಸಿದ್ದಾರೆ.
ಕುಪ್ಮಾ ರಾಜ್ಯ ಸಮಿತಿಯು ಈ ವರ್ಷವು ‘ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಜಿಲ್ಲಾವಾರು ಕರ್ನಾಟಕ ರಾಜ್ಯವ್ಯಾಪಿಯಾಗಿ ಹಮ್ಮಿಕೊಂಡಿದೆ. ಹೀಗೆ ಕುಪ್ಮಾ ಸದಸ್ಯರಿಗೆ ಕಾರ್ಯಾಗಾರ, ಕುಪ್ಮಾ ಶಿಕ್ಷಣ ಮುಕ್ತ ಸಮಾವೇಶ, ವಾರ್ಷಿಕ ಸಮಾವೇಶ ಸೇರಿದಂತೆ ಹಲಾವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷ ನೂತನ ಕಾರ್ಯಕ್ರಮವಾಗಿ ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆ.