ಬಲ್ಕ್ ಫಾರಂ–7 ದುರುಪಯೋಗದ ಮೂಲಕ ಮತದಾರರ ಹೆಸರು ಅಳಿಸುವ ಷಡ್ಯಂತ್ರ: ಕಾಂಗ್ರೆಸ್ ಆರೋಪ
ಮಂಗಳೂರಿನಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಪ್ರಚಾರ ಸಮಿತಿಯ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಪ್ರಮುಖ ನಾಯಕ ಸುಧೀರ್ ಕುಮಾರ್ ಮರೊಳಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಕೆಲವು ಕಡೆ ಸಗಟಾಗಿ ಫಾರಂ ನಂಬರ್ 7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಒಂದೇ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು 243 ಫಾರಂ–7 ಅರ್ಜಿಗಳನ್ನು ಸಲ್ಲಿಸಿರುವ ಉದಾಹರಣೆಯೂ ಇದೆ. ಇಂತಹ ಸಗಟು ಅರ್ಜಿ ಸಲ್ಲಿಕೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪರಿವಾರ ಸಂಘಟನೆಗಳ ಮುಖಂಡರ ಹೆಸರುಗಳು ಕಂಡುಬಂದಿವೆ ಎಂದು ಅವರು ಹೇಳಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನ ಕಟ್ಟೆಮನೆ ಬೂತ್‌ನಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸ್ಥಳೀಯ ಶಾಲಾ ಶಿಕ್ಷಕರಾಗಿರುವ ವಜೀರ್ ಖಾನ್ ಅವರ ಹೆಸರನ್ನೇ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಸುಳ್ಳು ಮಾಹಿತಿ ನೀಡಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರಂ–7 ಸಲ್ಲಿಸಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು. ಜೀವಂತವಾಗಿರುವವರನ್ನು ಮೃತರು ಅಥವಾ ಸ್ಥಳಾಂತರಗೊಂಡವರು ಎಂದು ನಮೂದಿಸಿ ಅರ್ಜಿ ಸಲ್ಲಿಸುವ ಪ್ರಕರಣಗಳೂ ಕಂಡುಬಂದಿವೆ. ವಿಚಾರ ಬೆಳಕಿಗೆ ಬಂದ ಬಳಿಕ ಕೆಲವು ಅರ್ಜಿಗಳನ್ನು ವಾಪಸ್ ಪಡೆಯುವ ಪ್ರಯತ್ನ ನಡೆದಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯೇ ಅಸಂವಿಧಾನಿಕವಾಗಿದ್ದು, ಇದರ ಮೂಲಕ ದೇಶದಲ್ಲಿ ಮತದಾನದ ಹಕ್ಕು ಹೊಂದಿರುವವರು ಹಾಗೂ ಮತದಾನದ ಹಕ್ಕಿನಿಂದ ವಂಚಿತರಾಗುವವರು ಎಂಬ ಎರಡು ವರ್ಗದ ನಾಗರಿಕರನ್ನು ಸೃಷ್ಟಿಸುವ ಅಪಾಯವಿದೆ ಎಂದು ಸುಧೀರ್ ಕುಮಾರ್ ಮುರಳಿ ಹೇಳಿದರು.
ಚುನಾವಣಾ ಆಯೋಗದ ಸ್ವಾಯತ್ತತೆಯ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ಆಯೋಗವು ಯಾವುದೇ ಪಕ್ಷದ ಪರವಾಗಿ ಮತದಾರರ ಪಟ್ಟಿಯನ್ನು ರೂಪಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಕೈಬಿಡಬಾರದು ಎಂದು ಅವರು ಒತ್ತಾಯಿಸಿದರು.
ಸಗಟು ಅರ್ಜಿದಾರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ
ಫಾರಂ ನಂಬರ್ 7ರ ಮೂಲಕ ಸುಳ್ಳು ಹಾಗೂ ಸಗಟು ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ದೂರುಗಾಗಿ ಕಾಯದೆ ಸ್ವಯಂಪ್ರೇರಿತವಾಗಿ (ಸೂಮೋಟೊ) ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ ಎಂದರು.
ಮತದಾರರ ಪಟ್ಟಿ ಸಿದ್ಧಪಡಿಸುವುದು ಚುನಾವಣಾ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ಆ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದರು.
ಮ್ಯಾಪಿಂಗ್ ಸಾಫ್ಟ್‌ವೇರ್‌ನಲ್ಲೂ ಲೋಪ:
ಚುನಾವಣಾ ಆಯೋಗ ಬಳಸುವ ಮ್ಯಾಪಿಂಗ್ ಸಾಫ್ಟ್‌ವೇರ್‌ನಲ್ಲೂ ಗಂಭೀರ ಲೋಪಗಳಿವೆ ಎಂದು ಸುಧೀರ್ ಕುಮಾರ್ ಮುರಳಿ ಆರೋಪಿಸಿದರು. ತಮ್ಮದೇ ಮತದಾರರ ಮಾಹಿತಿಯನ್ನು ಅದೇ ಬೂತ್‌ನ ಮತ್ತೊಬ್ಬ ‘ಸುಧೀರ್’ ಅವರ ಕುಟುಂಬದೊಂದಿಗೆ ತಪ್ಪಾಗಿ ಮ್ಯಾಪ್ ಮಾಡಲಾಗಿತ್ತು. ಅದರಲ್ಲಿ ಪತ್ನಿಯ ಹೆಸರೂ ತಪ್ಪಾಗಿ ನಮೂದಾಗಿತ್ತು. ಬಳಿಕ ಪರಿಶೀಲಿಸಿ ಸರಿಪಡಿಸಿಕೊಂಡಿರುವುದಾಗಿ ಅವರು ತಿಳಿಸಿದರು.
ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೂಕ್ತ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವಾ, ಸುಬೋಧಯಾಳ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಮೊಹಮ್ಮದ್ ನವಾಜ್, ಸಂತೋಷ್ ಡಿಕೋಸ್ತಾ, ಕೆ.ಪಿ. ಥಾಮಸ್, ಉದಯ ಕುಂದರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.