ಕರಾವಳಿಯಾದ್ಯಂತ ಆವರಿಸಿದ ಮಂಜು!: ಗ್ರಾಮೀಣ ಭಾಗದಲ್ಲಿ ರಾತ್ರಿ ಮಂಜಿನ ವಾತಾವರಣ, ದಿಢೀರ್ ಚಳಿ
ಮಂಗಳೂರು: ಕಳೆದ 4-5 ದಿನಗಳಿಂದ ಕರಾವಳಿಯಾಧ್ಯಂತ ಮಳೆಗೆ ಬ್ರೇಕ್ ಬಿದ್ದಿದೆ. ಮಳೆ ಕಡಿಲೆಯಾಗುತ್ತಿದ್ದಂತೆ ರಾತ್ರಿ ವೇಳೆ ಮಂಜು ಆವರಿಸಿಕೊಂಡಿದೆ. ಅಕಾಲಿಕ ಮಳೆಯ ಹೊಸ್ತಿಲಲ್ಲಿರುವ ಕರಾವಳಿಗೆ ಅತೀ ಬೇಗ ಮಂಜು ಸಹಿತ ಇಬ್ಬನಿಯ ಅನುಭವವಾಗಿದೆ.
2 ದಿನಗಳಿಂದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ಹಲವೆಡೆ ರಾತ್ರಿ ವೇಳೆ ಅತೀ ಹೆಚ್ಚು ಮಂಜು ಆವರಿಸಿತ್ತು. ಆರಂಭದಲ್ಲಿ ಹೊಗೆ ಇರಬಹುದೇನೋ ಎಂಬ ಭ್ರಮೆ ಆವರಿಸಿದ್ದರೂ, ನಿಧಾನವಾಗಿ ಚಳಿ ಆವರಿಸಿದ್ದರಿಂದ ಜನತೆಗೆ ಮಂಜು ಕವಿದ ಸ್ಪಷ್ಟ ಚಿತ್ರಣ ದೊರಕಿತು. ಈ ಮಧ್ಯೆ ಘಾಟಿ ಪ್ರದೇಶ ಶಿರಾಡಿ ಹಾಗೂ ಚಾರ್ಮಾಡಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಂಜು ಆವರಿಸಿಕೊಳ್ಳುತ್ತಿದೆ. ಈ ಚಿತ್ರಣವನ್ನು ಮಳೆ ಕ್ಷೀಣಿಸುವ ಮುನ್ಸೂಚನೆ ಎಂದ ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಹಗಲಿನಲ್ಲಿ ಜಾಸ್ತಿ ಬಿಸಿಯಾಗಿರದ ಉತ್ತಮ ವಾತಾವರಣ ವಿದ್ದರೂ, ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಸೆಕೆ ಅನುಭವವಾಗುತ್ತಿದೆ. ಗ್ರಾಮಾಂತರ ಭಾಗದಲ್ಲಂತೂ ಸಾಯಂಕಾಲದಿಂದಲೇ ತುಸು ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಸೂರ್ಯೋಧಯಕ್ಕೂ ಮುನ್ನ ಗಿಡ-ಮರಗಳ ಮೇಲೆ ಇಬ್ಬನಿ ಬಿಳುತ್ತಿರುವುದು ಸಹಜವಾಗುತ್ತಿದ್ದರೂ, ರಾತ್ರಿಯಿಡಿ ಮಂಜು ಆವರಿಸಿಕೊಳ್ಳುತ್ತಿದೆ. ಮಳೆ ಕ್ಷಣವಾದರೂ ಕರಾವಳಿಯ ಜೀವನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ.
ದೀಪಾವಳಿಗೆ ಮತ್ತೆ ಮಳೆ ಸಾಧ್ಯತೆ
ಪ್ರಸ್ಥುತ ಚಳಿ ಆವರಿಸಿದ್ದರೂ ಇದು ದೀರ್ಘಾವಧಿಯ ಪ್ರಕ್ರೀಯೆಯಲ್ಲ, ಇದನ್ನು ಮಳೆ ಕ್ಷೀಣಿಸುವ ಮುನ್ಸೂಚನೆ ಎಂದು ಹೇಳಬಹುದು. ಮಳೆಗಾಲ ಕೊನೆಯಾಗುವ ಸಂದರ್ಭ ತುಸು ಚಳಿ, ಕೆಲವು ದಿನಗಳ ನಂತರ ಸುಡುಬಿಸಿಲು ಆವರಿಸುತ್ತದೆ. ಚಳಿಗಾಲ ಏನಿದ್ದರೂ ಡಿಸೆಂಬರ್‌ನಲ್ಲಿ ಮಾತ್ರ ಹೆಚ್ಚು ಅನುಭವವಾಗುವುದು. ಮುಂದಿನ 3 ವಾರ ನಂತರ ದೀಪಾವಳಿ ವೇಳೆ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಚಳಿಗಾಲದಂತೆ ಒಣಹವೆ
ಕರಾವಳಿ ಜಿಲ್ಲೆಗಳಲ್ಲಿ ವಾತಾವರಣದ ತೇವಾಂಶ ಕಡಿಮೆ ಆಗಿದ್ದು, ಚಳಿಗಾಲದಂತೆ ಒಣಹವೆ-ರಾತ್ರಿ ಮಂಜು ಕವಿದ ವಾತಾವರಣ ಆರಂಭವಾಗಿದೆ ಎಂದು ಐಎಂಡಿ ಅಧಿಕೃತವಾಗಿ ತಿಳಿಸಿದೆ. ಬಂಗಾಳಕೊಲ್ಲಿಯ ಅರ್ನಬ್ ಚಂಡಮಾರುತವು ಆಂಧ್ರದ ಕರಾವಳಿ ಸಮೀಪ ಬರುತ್ತಿದ್ದು ಮುಂದಿನ 48ಗಂಟೆ ಕಾಕಿನಾಡದ ಸಮೀಪ ಭೂಭಾಗ ಪ್ರವೇಶಿಸಿ ದುರ್ಬಲವಾಗಿ ಉತ್ತರ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ.
ಹಿಂಗಾರು ಮಾರುತಗಳನ್ನು ಸೆಳೆಯುವುದರಿಂದ ಹಾಗೂ ಉತ್ತರ ಭಾರತದ ಒಣಗಾಳಿ ದಕ್ಷಿಣ ಭಾರತಕ್ಕೆ ಬೀಸುವ ಕಾರಣ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆ ಆಗಿ ಚಳಿಯ ಅನುಭವವಾಗಲಿದೆ. ನವೆಂಬರ್ ಮೊದಲವಾರ ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ಇನ್ನೊಂದು ಲೋ ಪ್ರೆಷರ್ ವಾತಾವರಣ ಆಗಲಿದ್ದು ಇದರಿಂದಾಗಿ ಹಿಂಗಾರು ಮಾರುತಗಳು ಸಹಜ ಸ್ಥಿತಿಗೆ ಬರಬಹುದು. ಈ ವೇಳೆ ಕರ್ನಾಟಕದ ಕರಾವಳಿ ಭಾಗದ ಹಲವಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.