ಗೃಹ ಮಂತ್ರಿ ಅಮಿತ್ ಶಾ ಈಗಿನ ಜನರಲ್ ಡಯರ್: ಸಂತೋಷ್ ಬಜಾಲ್
Saturday, October 10, 2026
ಮಂಗಳೂರು: ದೆಹಲಿಯ ಜಂತರ್ ಮಂತರ್ ನಲ್ಲಿ ಗ್ಯಾನೇಶ್ ರಾಜೀನಾಮೆಗೆ, ಎಸ್.ಐ.ಆರ್ ರದ್ದುಗೊಳಿಸಲು ನಡೆಸಿದ ಹೋರಾಟವನ್ನು ಹೇಗೆ ಹತ್ತಿಕ್ಕಲು ನಡೆಸಿದ ಪ್ರಯತ್ನವು ಅಘೋಷಿತ ತುರ್ತು ಪರಿಸ್ಥಿತಿಯಂತಿದೆ. ಅಂದು ಬ್ರಿಟೀಷ್ ಸರಕಾರ ಹೋರಾಟಗಾರರನ್ನು ವಿಚಾರಣೆಗೊಳಪಡಿಸದೆ ಬಂಧಿಸುವಂತಹ ರೌಲತ್ ಕಾಯ್ದೆಯಂತಿದ್ದು, ಅದನ್ನು ವಿರೋಧಿಸಿ ಜಲಿಯಾನವಾಲಾ ಭಾಗ್ ನಲ್ಲಿ ಸೇರಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೂರಾರು ಸುತ್ತಿನ ಗೋಲಿಬಾರ್ ನಡೆಸಿ ಹತ್ಯೆಗೈದ ಬ್ರಿಟೀಷ್ ಅಧಿಕಾರಿ ಜನರಲ್ ಡಯರ್ ನಿಗೂ ಇವತ್ತು ಜೆನ್ಜಿ ಹೋರಾಟಗಾರರನ್ನು ಅದೇ ರೀತಿಯಲ್ಲಿ ಸದೆಬಡಿಯುತ್ತಿರುವ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ದೆಹಲಿಯ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುವ ಹೋರಾಟಗಾರರ ಮೇಲೆ ಕ್ರೌರ್ಯ ಮೆರೆದ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಇಂದು ಡಿವೈಎಫ್ಐ, ಎಸ್ಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹ್ಯಾಮಿಲ್ಟನ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ನಡೆದ ಪಂಜಿನ ಮೆರವಣೆಗೆ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಜನವಿರೋಧಿ, ವಿದ್ಯಾರ್ಥಿ ಯುವಜನ ವಿರೋಧಿ ನೀತಿಗಳ ವಿರುದ್ಧ ಸಿಜೆಪಿ, ವಿದ್ಯಾರ್ಥಿ, ಯುವಜನ ಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಗಳು ಎಷ್ಟೇ ಪ್ರಯತ್ನಿಸಿದರೂ ದಮನಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹೋರಾಟ ಪೊಲೀಸ್ ಬಲಪ್ರಯೋಗದಿಂದ ಹೆದರಿ ಮೂಲೆ ಸೇರುವಂತಹ ಹೋರಾಟಗಳಲ್ಲ ಇದು ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ಆಶಯಗಳನ್ನು ಮೈಗೂಡಿಸಿಕೊಂಡು ಯಾವ ತ್ಯಾಗಕ್ಕೂ ಸಿದ್ದರಾಗಿ ನಡೆಸುವ ಹೋರಾಟವಾಗಿದೆ.
ದೆಹಲಿಯಲ್ಲಿ ವಿದ್ಯಾರ್ಥಿ ಯುವಜನರು ಹೋರಾಟ ನಡೆಸದಂತೆ ಹಿಂದಿನ ದಿನವೇ ಪ್ರಮುಖ ನಾಯಕರುಗಳನ್ನು, ಎಡಪಕ್ಷದ ಮುಖಂಡರುಗಳನ್ನು ದೆಹಲಿಗೆ ಪ್ರಯಾಣಿಸುವ ಮೊದಲೇ ಬಲಪ್ರಯೋಗದ ಮೂಲಕ ಬಂಧಿಸಲಾಗಿದೆ. ರೈಲು, ಮೆಟ್ರೋ, ವಿಮಾನಗಳನ್ನು ರದ್ದುಗೊಳಿಸಿದ ಈ ನಡೆ 1975ರ ತುರ್ತು ಪರಿಸ್ಥಿತಿ ಸಂಧರ್ಭದಲ್ಲೂ ನಡೆದಿರಲಿಲ್ಲ. ಬಿಜೆಪಿ ಸರಕಾರ ಈ ರೀತಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆದರಿ ನಿರ್ಬಂಧ ಹೇರಿದರೆ ಇಡೀ ಭಾರತ ದೇಶವೇ ಹೋರಾಟದ ಕಣಗಳಾಗಲಿವೆ ಎಚ್ಚರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ ವೈ ಎಫ್ ಐ ನ ಜಿಲ್ಲಾ ಅಧ್ಯಕ್ಷ ಮನೋಜ್ ವಾಮಂಜೂರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಂಗಳೂರು ನಗರ ಅಧ್ಯಕ್ಷರಾದ ಅಡ್ವಕೇಟ್ ಚರಣ್ ಶೆಟ್ಟಿ ಪಂಜಿಮೊಗರು, ಕಾರ್ಯದರ್ಶಿಯಾದ ತೖಯೂಬ್ ಬೆಂಗ್ರೆ, ಎಸ್ಎಫ್ಐ ಜಿಲ್ಲಾ ಅಧ್ಯಕ್ಷರಾದ ಅಝ್ಲಾನ್ ಬೆಂಗರೆ, ಜಿಲ್ಲಾ ಕಾರ್ಯದರ್ಶಿ ವಿನಾಯಕ್ ಮಂಗಳೂರು, ಜಿಲ್ಲಾ ಮುಖಂಡರಾದ ಸುನಿಲ್ ತೆವುಲ, ಜಗದೀಶ್ ಬಜಾಲ್, ಮಾಧುರಿ ಬೋಳಾರ್, ಮಹೇಶ್ ಬೊಂಡಂತಿಲ, ರಝಾಕ್ ಮೊಂಟೆಪದವು, ಹನೀಫ್ ಬೆಂಗರೆ, ಜಂಶೀರ್ ಬೆಂಗರೆ, ಬಿ.ಕೆ ಇಮ್ತಿಯಾಜ್, ರಫೀಕ್ ಹರೇಕಳ, ಪುನೀತ್ ಉರ್ವಸ್ಟೋರ್ , ಸೌಮ್ಯ ಪಂಜಿಮೊಗರು, ನೌಶದ್ ಬಾವು, ಶ್ರೀನಾಥ್ ಕಾಟಿಪಳ್ಳ, ಮಕ್ಸೂದು, ಆನಂದ ಎನೆಲ್ಮಾರ್ ಮೊದಲಾದವರು ಉಪಸ್ಥಿತರಿದ್ದರು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ರಿಜ್ವಾನ್ ಹರೇಕಳ ನಿರೂಪಿಸಿದರು.



