‘ವೈಫಲ್ಯ ಮರೆಮಾಚಲು ಶಾಸಕರಿಂದ ಪ್ರತಿಭಟನೆ ನಾಟಕ’: ಎ.ಸಿ. ವಿನಾಯರಾಜ್ ಆರೋಪ
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಎಂಟು ವರ್ಷದ ಅವಧಿಯ ಅಭಿವೃದ್ಧಿ ಕಾರ್ಯವೈಖರಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಅವರ ಪ್ರಯತ್ನದಿಂದ ಎಷ್ಟು ಕೋಟಿ ಹಣ ಮಂಗಳೂರು ನಗರಕ್ಕೆ ತಂದಿದ್ದಾರೆ ಎಂದು ಬಹಿರಂಗ ಪಡಿಸಲಿ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಈಗ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಮೇಲೆ ಕೆಸರನ್ನು ಎರಚುವ ಕಾರ್ಯವೈಖರಿಯನ್ನು ನಿಲ್ಲಿಸಬೇಕಾಗಿದೆ. ನಗರದಲ್ಲಿ ಮತದಾರರು ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಅವರು ನೀಡಿದ ಅನುದಾನ ಮತ್ತು ಕೊಡುಗೆ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದರು.
ಮ.ನ.ಪಾ ದಲ್ಲಿ ಆಡಳಿತ ಮಾಡುತ್ತಿದ್ದ ಪಕ್ಷ ಬಿಜೆಪಿ. ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಪಕ್ಷದ ಶಾಸಕರೇ ಇದ್ದಾರೆ. 2019-2025 ರ ತನಕ ಬಿಜೆಪಿ ಯ ಆಡಳಿತದ ನಗರಪಾಲಿಕೆ ನಗರದಲ್ಲಿತ್ತು. 2019-2023 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು.
ಮಂಗಳೂರು ಶಾಸಕರು ಮತ್ತು ಬಿಜೆಪಿ ಆಡಳಿತದ ನಗರಪಾಲಿಕೆ ಮಂಗಳೂರು ನಗರದಾದ್ಯಂತ ಇರುವ ರಸ್ತೆಗಳನ್ನು, ಒಳಚರಂಡಿಗಳನ್ನು ಸುಸ್ಥಿತಿಯಲ್ಲಿ ಇಡುವಂತಹ ಜವಾಬ್ದಾರಿ ಅವರ ಮೇಲೆ ಇತ್ತು. ಆ ಸಂಧರ್ಭದಲ್ಲಿ ಅವರ ಜವಾಬ್ದಾರಿಯನ್ನು ನಿಭಾಯಿಸದೇ ಇದ್ದುದರಿಂದ ಇಂದು ಕೆಲವು ರಸ್ತೆಗಳ ಪರಿಸ್ಥಿತಿ ಕೆಟ್ಟು ಹೋಗಿದೆ ಎಂದು ಆರೋಪಿಸಿದರು.
2018-19 ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಂತಹ ಸಂಧರ್ಭದಲ್ಲಿ ಇಂದಿನ ಆರೋಗ್ಯ ಸಚಿವರಾಗಿರುವಂತಹ ಯು.ಟಿ.ಖಾದರ್ ರವರು ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಂತಹ ಸಂಧರ್ಭದಲ್ಲಿ ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ-1 ಎಂಬ ಯೋಜನೆಯನ್ನು ಹಾಕುವ ಮೂಲಕ ಮನಪಾ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 125 ಕೋಟಿ ರೂ. ಬಜೆಟಿನಲ್ಲಿ ಮೀಸಲಿಟ್ಟಿದ್ದರು. ಜುಲೈ 2019 ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದು, ಮೈತ್ರಿ ಸರ್ಕಾರದ ?ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ-1 ಕ್ಕೆ ಅನುಮೋದನೆ ನೀಡಿತ್ತು. ಅದರಲ್ಲಿ ಸುಮಾರು 60 ಕೋಟಿಯ ಅನೇಕ ಕಾಮಗಾರಿಗಳು ಮನಪಾ ವ್ಯಾಪ್ತಿಯಲ್ಲಿ ನಡೆದಿರುತ್ತದೆ.
ಮಾತ್ರವಲ್ಲದೇ, ಮನಪಾ ಗೆ ಕೆ.ಯು.ಐ.ಡಿ.ಎಫ್.ಸಿ ಮೂಲಕ ಒಳಚರಂಡಿಗೆ 100 ಕೋಟಿ ರೂ., ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ-2- 145 ಕೋಟಿ ರೂ., ಪ್ರತಿ ಶಾಸಕರಿಗೆ ವಿಶೇಷ ಅನುದಾನ-25 ಕೋಟಿ ರೂ., ನೈಸರ್ಗಿಕ ವಿಕೋಪದ ಅಡಿಯಲ್ಲಿ ಸುಮಾರು 10 ಕೋಟಿ ರೂ., 15 ನೇ ಹಣಕಾಸು ಆಯೋಗದಿಂದ ಪ್ರತಿವರ್ಷ ಸುಮಾರು 19 ಕೋಟಿ ರೂ., ರಾಜ್ಯ ಹಣಕಾಸು ಆಯೋಗದಿಂದ ಪ್ರತಿವರ್ಷ ಸುಮಾರು 5 ಕೋಟಿ ರೂ., ಇತ್ತೀಚಿನ ಸಚಿವ ಸಂಪುಟದಲ್ಲಿ ರಸ್ತೆ ಅಭಿವೃದ್ಧಿಗೆ 400 ಕೋಟಿ ರೂ. ಹಾಗೂ ಮ.ನ.ಪಾ ದ ಸಾಮಾನ್ಯ ನಿಧಿ ಹಣ ಇದೆ ಎಂದು ಅವರು ಹೇಳಿದರು.
ಮಂಗಳೂರು ದಸರಾ ಇದು ರಾಜಕೀಯೇತರ ಉತ್ಸವವಾಗಿದ್ದು, ಈ ಉತ್ಸವವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಣೀಯವಾಗಿ ಮಾಡಲು ಜಾತಿ, ಮತ, ಭೇದವೆನ್ನದೆ ಎಲ್ಲರೂ ಸಹಕರಿಸುತ್ತಿದ್ದಾರೆ. ಮಂಗಳೂರು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲು ಮನಪಾ ದಲ್ಲಿ ಎಲ್ಲಾ ಪಕ್ಷಗಳ ಒಕ್ಕೊರಲ ನಿರ್ಧಾರದಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಆದರೆ ಶಾಸಕರು ಇದು ಅವರ ಕೊಡುಗೆ ಎಂಬಂತೆ ಬಿಂಬಿಸುವುದನ್ನು ಕೂಡಲೇ ನಿಲ್ಲಿಸಬೇಕಾಗಿದೆ. ಮನಪಾ ಜನರ ತೆರಿಗೆ ಹಣವನ್ನು ಇದಕ್ಕೆ ಖರ್ಚು ಮಾಡುತ್ತಿದೆ ಎಂದು ಹೇಳಿದರು.
ನಾಯಕರಾದ ಜೆ ಅಬ್ದುಲ್ ಸಲೀಮ್, ಪ್ರಕಾಶ್ ಸಾಲಿಯಾನ್, ಎಸ್ ಅಪ್ಪಿ, ಸಬೀತ ಮಿಸ್ಕಿತ್, ಸಂಸುಂದ್ದಿನ್ ಕುದ್ರೋಳಿ, ಅನಿಲ್ ಪೂಜಾರಿ, ಅಶ್ರಫ್ ಬಜಾಲ್ ಉಪಸ್ಥಿತರಿದ್ದರು.