ಡಿಸಿ ಕಚೇರಿಗೆ ವಿದ್ಯುತ್ ಕಾಟ
ಮಂಗಳೂರು: ತಾಂತ್ರಿಕ ದೋಷದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡು, ಕಚೇರಿ ಕೆಲಸಗಳಿಗೆ ಅಡಚಣೆಯಾಗಿದೆ.
ಬೆಳಗ್ಗೆ 10 ಗಂಟೆಗೆ ಕಚೇರಿ ಆರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿದೆ. ಜನರೇಟರ್ ವ್ಯವಸ್ಥೆ ಇದ್ದರೂ ವಿದ್ಯುತ್ ಪೂರೈಕೆಯಾಗಲಿಲ್ಲ. ಕಚೇರಿಯ ತಾಂತ್ರಿಕ ಸಿಬ್ಬಂದಿ ಹಾಗೂ ವಾಚ್ಮೆನ್ ಪ್ರಯತ್ನಿಸಿದರೂ ದೋಷ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ವಿವಿಧ ಇಲಾಖೆಗಳ ಕೆಲಸಗಳು ಸ್ಥಗಿತಗೊಂಡು, ಸಿಬ್ಬಂದಿ ಹಾಗೂ ನಾಗರಿಕರು ತೊಂದರೆ ಅನುಭವಿಸಿದರು. ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ವಿದ್ಯುತ್ ಸಂಪರ್ಕ ಅಳವಡಿಸಿರುವ ತಾಂತ್ರಿಕ ಸಿಬ್ಬಂದಿಯನ್ನು ಕರೆಸಲಾಯಿತು. ಅವರು ತಕ್ಷಣ ತಾಂತ್ರಿಕ ದೋಷವನ್ನು ದುರಸ್ತಿಗೊಳಿಸಿದ ಬಳಿಕ ವಿದ್ಯುತ್ ಸಂಪರ್ಕಗೊಂಡಿದೆ. ಸಂಪೂರ್ಣ ಕಚೇರಿ ಸಂಕೀರ್ಣದ ವಿದ್ಯುತ್ ಬೋರ್ಡ್ ಸ್ವಿಚ್ಗಳು ಟ್ರಿಪ್ ಆದ ಕಾರಣ ಈ ಅಚಾತುರ್ಯ ನಡೆದಿದೆ ಎನ್ನಲಾಗಿದೆ.
ಮೆಸ್ಕಾಂನವರು ಲೈನ್ ಶಿಫ್ಟ್ ಮಾಡುತ್ತಿದ್ದರು ಹಾಗಾಗಿ ಅಡಚಣೆ ಆಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ತಿಳಿಸಿದ್ದಾರೆ.