ಮಂಗಳಾದೇವಿ ದೇವಾಲಯದ ನವರಾತ್ರಿ ಉತ್ಸವ ಪರಂಪರೆ ಮತ್ತು ಸಂಸ್ಕೃತಿಯ ಸಮ್ಮಿಳನ
ನವರಾತ್ರಿ ಹುಲಿವೇಷ ಮೊದಲು ಆರಂಭಗೊಂಡದ್ದು ಮಂಗಳಾದೇವಿಗೆ ಹರಕೆ ರೂಪದಲ್ಲಿ ಎನ್ನಲಾಗುತ್ತದೆ. ಮಂಗಳಾದೇವಿ ಪುರದೇವತೆ.ಮಂಗಳೂರೆಂಬ ಹೆಸರು ಬರುವುದಕ್ಕೂ ಈ ದೇವತೆಯೇ ಕಾರಣ.
ಮಂಗಳೂರು ನಗರದ ಹೆಸರಿನ ಮೂಲವಾಗಿರುವ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ವೈಭವದಿಂದ ನಡೆಯುತ್ತಿದ್ದು, ಅ.11ರಿಂದ 22ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಉತ್ಸವವು ಕೊಪ್ಪರಿಗೆ ಏರಿಸುವ ಮೂಲಕ ಆರಂಭಗೊಂಡಿದ್ದು, ನವರಾತ್ರಿಯ ದಿನಗಳಲ್ಲಿ ದೇವಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಕಲ್ಪೋಕ್ತ ಪೂಜೆ, ವಿಶೇಷ ಹವನ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಗುತ್ತಿದೆ. ದೇವಿಯ ದರ್ಶನಕ್ಕಾಗಿ ಮಂಗಳೂರು ನಗರ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ನವರಾತ್ರಿಯ ಅಂಗವಾಗಿ ಮಂಗಳಾಂಬೆಯನ್ನು ದುರ್ಗಾದೇವಿ, ಆರ್ಯದೇವಿ, ಭಗವತಿ, ಕೌಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ, ಸರಸ್ವತಿ, ವಾಗೀಶ್ವರಿ ಹಾಗೂ ಶ್ರೀ ಮಂಗಳಾದೇವಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ. ಈ ಬಾರಿ ಎರಡು ಸಪ್ತಮಿ ತಿಥಿಗಳು ಬಂದಿರುವುದರಿಂದ ಒಟ್ಟು 11 ದಿನಗಳ ಕಾಲ ವಿಶೇಷ ಅಲಂಕಾರಗಳೊಂದಿಗೆ ಪೂಜೆ ನಡೆಯುತ್ತಿದೆ. ಪ್ರತಿದಿನ ದೇವಿಗೆ ವಿಶಿಷ್ಟ ಬಣ್ಣದ ಸೀರೆ, ಪುಷ್ಪಾಲಂಕಾರ ಹಾಗೂ ಆಭರಣಗಳಿಂದ ಅಲಂಕರಿಸಿ ಆರಾಧಿಸಲಾಗುತ್ತಿದೆ.
ಅ.19ರಂದು ದುರ್ಗಾಷ್ಟಮಿ ಮತ್ತು ಅ.20ರಂದು ಮಹಾನವಮಿ ಪ್ರಯುಕ್ತ ಚಂಡಿಕಾ ಯಾಗ, ದೊಡ್ಡ ರಂಗಪೂಜೆ ಹಾಗೂ ಸಣ್ಣ ರಥೋತ್ಸವ ನಡೆಯಲಿದೆ. ಅ.21ರಂದು ವಿಜಯದಶಮಿಯಂದು ಮಂಗಳಾದೇವಿಯ ವಿಶೇಷ ಪೂಜೆ, ಮಕ್ಕಳಿಗೆ ವಿದ್ಯಾರಂಭ, ರಥಾರೋಹಣ ಹಾಗೂ ರಥೋತ್ಸವ ನೆರವೇರಲಿದೆ. ವಿಜಯದಶಮಿಯಂದು ಎಂಟು ಗ್ರಾಮಗಳ ಜನರಿಗೆ ತೆನೆ ವಿತರಿಸುವ ಸಂಪ್ರದಾಯವೂ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ನಡೆಯಲಿದೆ.
ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಲಾಗಿದೆ. ನಗರ ಮತ್ತು ಹೊರಭಾಗಗಳಿಂದ ವಾಹನಗಳಲ್ಲಿ ಹಾಗೂ ಪ್ರವಾಸಿ ಬಸ್ಗಳಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮಂಗಳಾದೇವಿಯ ನವರಾತ್ರಿ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಭಾವುಕತೆಯ ಸಮ್ಮಿಳನ. ಕತ್ತಲೆಯಲ್ಲಿ ಹೂ ಬಿಟ್ಟಂತೆ ಇದೆ ಇಲ್ಲಿಯ ದೀಪಾಲಂಕಾರ. ಕಳವಳ, ಅಧೀರತೆ, ಅನಿಶ್ಚತತೆ ತಳೆದ ಭಗ್ನ ಹೃದಯಗಳಿಗೆ ಮಂಗಳಾದೇವಿ ಸಾಂತ್ವನದ ಆಲಯ. ದೇವಬಿಂಬದೆದುರು ನಿಲ್ಲುವ ಭಕ್ತರಿಗೆ ಅಲ್ಲಿ ಮೌನ ವಿಕಾಸವಾಗಿ, ಅದು ಅಭಯವಾಗಿ, ಬದುಕಿನ ದಾರಿಗೆ ಬೆಳಕು ತೋರುವ ಶಕ್ತಿಯಾಗಿ ಗೋಚರಿಸುತ್ತದೆ.