ಹಿಂದೂ ಕಾರ್ಯಕರ್ತರ ಗುರಿಯಾಗಿಸಿ ಪೊಲೀಸ್ ಇಲಾಖೆ ದೌರ್ಜನ್ಯ: ಜೈಲ್ ಭರೋ ಎಚ್ಚರಿಕೆ
ರಾಜ್ಯ ಕಾಂಗ್ರೆಸ್ ಸರಕಾರ ಪೊಲೀಸರ ಮೂಲಕ ಹಿಂದು ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ವಿನಾಕಾರಣ ಪ್ರಕರಣ ದಾಖಲು, ಗಡಿಪಾರು, ಬಾಂಡ್ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ, ವಕೀಲ ಕಿಶೋರ್ಕುಮಾರ್ ಕೋಡಿಕಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪುತ್ತೂರಿನ ದರ್ಬೆಯ ಜೆರಾಕ್ಸ್ ಅಂಗಡಿ ಗಲಾಟೆಯ ಸಂದರ್ಭದಲ್ಲಿ ಪೊಲೀಸರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆ ಸ್ವಯಂ ಪ್ರೇರಿತ ಪುತ್ತೂರು ಬಂದ್ಗೆ ಕರೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂಜಾವೇ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ಈ ಪ್ರಕರಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದೇ ಪ್ರಕರಣದಲ್ಲಿ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಹೇಳಿಕೆ ನೀಡಿದ್ದ ಹಿಂಜಾವೇ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ ಅವರ ವಿರುದ್ಧ ಒಂದು ತಿಂಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಅವರ ವಿರುದ್ಧ ಒಂದು ತಿಂಗಳ ನಂತರ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 107ರ ಅಡಿಯಲ್ಲಿ ನೋಟಿಸ್ ನೀಡಿ ಬಾಂಡ್ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿರುವುದು, 8 ವರ್ಷ ಹಿಂದಿನ ಪ್ರಕರಣಗಳಿಗೂ ಹಿಂದೂ ಸಾಮಾಜಿಕ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಯ ಪ್ರಮುಖರಿಗೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಮತ್ತು ಗಡಿಪಾರು ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿರುವ ಪೊಲೀಸ್ ಅಽಕಾರಿಗಳ ವರ್ತನೆ ಖಂಡನೀಯ ಎಂದು ಹೇಳಿದರು.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಸೆಕ್ಷನ್ 107ರ ಅಡಿಯಲ್ಲಿ ನೋಟಿಸ್ ನೀಡಿದ ಬಳಿಕ, ರಾತ್ರಿ ವೇಳೆ ಅವರ ಮನೆಗಳಿಗೆ 20ರಿಂದ 30 ಮಂದಿ ಪೊಲೀಸರ ತಂಡ ತೆರಳಿ ದಾಳಿ ನಡೆಸುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇಂತಹ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ದಸರಾ ಸಂದರ್ಭದಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ವಿರೋಽಸಿ ನಡೆದ ಪ್ರತಿಭಟನೆ ವೇಳೆ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಯ ಮೇಲೆ ಎಸಿಪಿಯೊಬ್ಬರು ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಮತ್ತು ವಿದ್ಯಾರ್ಥಿನಿಯರ ಮೇಲಿನ ಹಲ್ಲೆಯ ಆರೋಪ ಎದುರಿಸುತ್ತಿರುವ ಪುರುಷ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸದಿರುವ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು. ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳು ಡ್ರಗ್ಸ್ ಮಾಫಿಯಾದ ಅಡ್ಡೆಗಳಾಗುತ್ತಿವೆ. ಅಕ್ರಮ ಗೋ ಸಾಗಾಟ, ಅಕ್ರಮ ಕಸಾಯಿಖಾನೆಗಳು ಹಾಗೂ ಅಕ್ರಮ ಮಸಾಜ್ ಸೆಂಟರ್ಗಳಂತಹ ಕಾನೂನುಬಾಹಿರ ಚಟುವಟಿಕೆಗಳು ಯಾರ ಭಯವು ಇಲ್ಲದೆ ನಡೆಯುತ್ತಿದೆ ಎಂದರು.
ಹಿಂಜಾವೇ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಸಹ ಸಂಯೋಜಕ ಪ್ರದೀಪ್ ಅಜ್ಜಿಬೆಟ್ಟು, ಪುತ್ತೂರು ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ, ಮಂಗಳೂರು ಮಹಾನಗರ ಜಿಲ್ಲೆ ಸಹಸಂಯೋಜಕ ಸುಧೀಂದ್ರ ಪ್ರಕಾಶ್ ಮಂಗಳಾದೇವಿ ಉಪಸ್ಥಿತರಿದ್ದರು.