‘ಭಾರತೀಯ ಹಿಟ್ ಜನತಾ ಪಾರ್ಟಿ’ ಆಸ್ತಿತ್ವಕ್ಕೆ: ಗಣೇಶ್ ಶೆಣೈ ಎಂ.
ಮಂಗಳೂರು: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಗೆ ವಿರುದ್ಧವಾಗಿ ಮಂಗಳೂರಿನಲ್ಲಿ ಹೊಸದಾಗಿ ‘ಭಾರತೀಯ ಹಿಟ್ ಜನತಾ ಪಾರ್ಟಿ’ ಸ್ಥಾಪಿಸಲಾಗಿದೆ ಎಂದು ನೂತನ ಪಕ್ಷದ ಸ್ಥಾಪಕ ಅಧ್ಯಕ್ಷ ಗಣೇಶ್ ಶೆಣೈ ಎಂ. ತಿಳಿಸಿದರು.
ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ಸಿಜೆಪಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ. ಸಿಜೆಪಿ ಕಾರ್ಯಕರ್ತರು ಸೈನಿಕರು, ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕಾಗಿ ವಿದೇಶದಿಂದ ಹಣ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶ ಮೊದಲು ಎಂಬ ಪರಿಕಲ್ಪನೆಯೊಂದಿಗೆ ಬಿಜೆಪಿ ಕಾರ್ಯಕರ್ತನಾದ ನಾನು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪಿಸಿದ್ದೇನೆ. ಶೀಘ್ರದಲ್ಲಿ ಪಕ್ಷವನ್ನು ನೋಂದಣಿ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ನಮ್ಮ ಪಕ್ಷ ಸಂವಿಧಾನಕ್ಕೆ ನಿಷ್ಠೆ ಹೊಂದಿದ್ದು, ದೇಶ ಮೊದಲು ಎಂಬ ತತ್ತ್ವದೊಂದಿಗೆ ಕಾರ್ಯಾಚರಿಸಲಿದೆ. ಆರಂಭಿಕವಾಗಿ 80 ಮಂದಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಸದಸ್ಯತ್ವ ಶುಲ್ಕ ಕನಿಷ್ಠ 2 ರೂ. ನಿಗದಿಪಡಿಸಲಾಗಿದೆ. ನಮ್ಮ ಪಕ್ಷ ‘ದೇಶ ಮೊದಲು, ಧರ್ಮ, ಜಾತಿ, ಪಕ್ಷ ನಂತರ’ ಎಂಬ ಧ್ಯೇಯ ಹೊಂದಿದೆ. ಮೊಬೈಲ್ ಚಾರ್ಜರ್ ಪಕ್ಷದ ಚಿನ್ಹೆಯಾಗಿದೆ. ನಾಗರಿಕರು ನಮ್ಮ ಪಕ್ಷವನ್ನು ಬೆಂಬಲಿಸುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ನಳಿನಿ ರೈ ಉಪಸ್ಥಿತರಿದ್ದರು.